ಕೋವಿಡ್ ಲಸಿಕೆ ಶೇ. 110 ಸುರಕ್ಷಿತ, ವದಂತಿ ಸಂಪೂರ್ಣ ಅಸಂಬದ್ಧ: ಡಿಸಿಜಿಐ
ಹೊಸದಿಲ್ಲಿ, ಜ. 3: ಕೋವಿಡ್ ಲಸಿಕೆ ನಪುಂಸಕತ್ವಕ್ಕೆ ಕಾರಣವಾಗುತ್ತದೆ ಎಂಬ ವದಂತಿಯನ್ನು ರವಿವಾರ ನಿರಾಕರಿಸಿರುವ ಭಾರತದ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ), ಅಂತಹ ವದಂತಿಗಳು ಸಂಪೂರ್ಣ ಅಸಂಬದ್ಧ ಎಂದು ಹೇಳಿದ್ದಾರೆ.
ಒಂದು ವೇಳೆ ಸ್ವಲ್ಪ ಮಟ್ಟಿನ ಸುರಕ್ಷಿತಾ ಆತಂಕ ಇದ್ದರೂ ನಾವು ಎಂದಿಗೂ ಯಾವುದನ್ನೂ ಅನುಮೋದಿಸಲಾರೆವು. ಲಸಿಕೆಗಳು ಶೇ. 110 ಸುರಕ್ಷಿತವಾಗಿವೆ. ಯಾವುದೇ ಲಸಿಕೆಗಳನ್ನು ತೆಗೆದುಕೊಳ್ಳುವಾಗ ಸಾಮಾನ್ಯವಾಗಿ ಉಂಟಾಗುವ ಲಘು ಜ್ವರ, ನೋವು ಹಾಗೂ ಅಲರ್ಜಿಯಂತಹ ಕೆಲವು ಅಡ್ಡ ಪರಿಣಾಮಗಳು ಈ ಲಸಿಕೆಯಿಂದ ಕೂಡ ಆಗುತ್ತವೆ. ಆದರೆ, ಈ ಲಸಿಕೆ ನಪುಂಸಕತ್ವಕ್ಕೆ ಕಾರಣವಾಗುತ್ತದೆ ಎಂಬುದು ಸಂಪೂರ್ಣ ಅಸಂಬದ್ಧ ಎಂದು ಭಾರತದ ಪ್ರಧಾನ ಔಷಧ ನಿಯಂತ್ರಕ ವಿ.ಜಿ. ಸೋಮಾನಿ ತಿಳಿಸಿದ್ದಾರೆ. ಲಸಿಕೆ ತುಂಬಾ ಸುರಕ್ಷಿತವಾದುದು. ಅದರ ಪರಿಣಾಮದ ಬಗ್ಗೆ ಚಿಂತೆ ಮಾಡಬೇಡಿ ಎಂದು ಅವರು ಹೇಳಿದರು.
ಸಾಕಷ್ಟು ಪರೀಕ್ಷೆ ನಡೆದ ಬಳಿಕ ತಜ್ಞರ ಸಮಿತಿಯ ಶಿಫಾರಸುಗಳನ್ನು ಸ್ವೀಕರಿಸಲು ಸಿಡಿಎಸ್‌ಸಿಒ ನಿರ್ಧರಿಸಿತು. ಅದರಂತೆ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಮೆಸರ್ಸ್ ಸಿರಮ್ ಹಾಗೂ ಮೆಸರ್ಸ್ ಭಾರತ್ ಬಯೋಟೆಕ್‌ನ ಲಸಿಕೆಗಳಿಗೆ ಅನುಮೋದನೆ ನೀಡಲಾಗಿತ್ತು. ಅಲ್ಲದೆ, ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಮೆಸರ್ಸ್ ಕ್ಯಾಡಿಲ್ಲಾ ಹೆಲ್ತ್‌ಕೇರ್‌ಗೆ ಅನುಮತಿ ನೀಡಲಾಗಿತ್ತು ಎಂದು ವಿ.ಜಿ. ಸೋಮಾನಿ ಹೇಳಿದ್ದಾರೆ.