ಒಂದು ದೇಶ ಒಂದು ನೀತಿ ಕಾರ್ಮಿಕರಿಗೆ ಮಾರಕ: ಬಾಲಕೃಷ್ಣ ಶೆಟ್ಟಿ

Update: 2021-01-04 14:02 GMT

ಕುಂದಾಪುರ, ಜ.4: ದೇಶದ ಕಾರ್ಮಿಕರ ಭವಿಷ್ಯನಿಧಿ, ಇಎಸ್‌ಐಗಳಲ್ಲಿರುವ ಲಕ್ಷಾಂತರ ಕೋಟಿ ಹಣವನ್ನು ಒಂದು ದೇಶ ಒಂದು ನೀತಿ ಹೆಸರಿನಲ್ಲಿ ವಿಲೀನ ಮಾಡುತ್ತಿದೆ. ಕಟ್ಟಡ ಕಾರ್ಮಿಕರ 1996 ಕಾರ್ಮಿಕ ಕಾನೂನು ರದ್ದುಗೊಳಿಸಿ ರಾಜ್ಯಗಳ ಕಲ್ಯಾಣ ಮಂಡಳಿಗಳ ಸುಮಾರು 80 ಸಾವಿರ ಕೋಟಿಯನ್ನು ಕೇಂದ್ರ ಸರಕಾರ ವಶಪಡಿಸಿಕೊಂಡು ಒಂದೇ ಕಾನೂನು ತರುತ್ತಿದೆ. ಇದು ಕಟ್ಟಡ ಕಾರ್ಮಿಕರ ಸೌಲಭ್ಯಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಫೆಡರೇಷನ್ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.

ಕುಂದಾಪುರ ಹೆಂಚು ಕಾರ್ಮಿಕ ಭವನದಲ್ಲಿ ರವಿವಾರ ಆಯೋಜಿಸಲಾದ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ 14ನೆ ಮಹಾಸಭೆಯನ್ನು ಉಧ್ಘಾಟಿಸಿ ಅವರು ಮಾತನಾಡುತಿದ್ದರು.

ಸರಕಾರದ ನಿರ್ಲಕ್ಷ್ಯದಿಂದ ಕುಂದಾಪುರ ಹಾಗು ಬೈಂದೂರುಗಳಲ್ಲಿ ಮರಳು ಸಮಸ್ಯೆ ಶಾಶ್ವತವಾಗಿ, ಅಕ್ರಮ ಮರಳುಗಾರಿಕೆಗೆ ಅವಕಾಶ ವಾಗಿದೆ. ಅಕ್ರಮ ಮರಳುಗಾರಿಕೆಯಿಂದ ಕೆಲವೇ ಕೆಲವು ಪ್ರಭಾವಿ ವ್ಯಕ್ತಿಗಳು ಸುಮಾರು 4 ಸಾವಿರ ಕೋಟಿಗಳಷ್ಟು ಲಾಭ ಮಾಡುತ್ತಿದ್ದಾರೆ. ಸಕ್ರಮ ಮರಳುಗಾರಿಕೆಯಿಂದ ಸರಕಾರಕ್ಕೆ ಕೇವಲ ನಾಲ್ಕು ಕೋಟಿ ಹಣ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಸಮಸ್ಯೆ ಬಗೆಹರಿಸದ ಸರಕಾರವೇ ಪ್ರಭಾವಿ ವ್ಯಕ್ತಿಗಳ ಜೊತೆ ಶಾಮೀಲಾಗಿದೆಯೇ ಎಂಬ ಸಂಶಯವಿದೆ ಎಂದು ಅವರು ದೂರಿದರು.

ಮುಖ್ಯ ಅತಿಥಿಗಳಾಗಿ ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಉಪಾಧ್ಯಕ್ಷ ಮಹಾಬಲ ವಡೇರಹೋಬಳಿ, ಸಿಐಟಿಯು ಕುಂದಾಪುರ ಸಂಚಾಲಕ ಎಚ್. ನರಸಿಂಹ, ಬೀಡಿ ಕಾರ್ಮಿಕ ಸಂಘಟನೆಯ ಬಲ್ಕೀಸ್ ಮಾತನಾಡಿದರು. ಸಂಘಟನಾ ಕರಡು ವರದಿಯನ್ನು ನಿರ್ಮಾಣ ಕಾರ್ಮಿಕರ ಪ್ರಧಾನ ಕಾರ್ಯ ದರ್ಶಿ ಸುರೇಶ್ ಕಲ್ಲಾಗರ ಮಂಡಿಸಿದರು. ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿ ಕಾರಿ ಜಗದೀಶ್ ಆಚಾರ್ ಮಂಡಿಸಿದರು.

ಅಧ್ಯಕ್ಷತೆಯನ್ನು ಯು.ದಾಸಭಂಡಾರಿ ವಹಿಸಿದ್ದರು. ಕಟ್ಟಡ ಕಾರ್ಮಿಕರಿಗೆ ಪಿಎಫ್, ಇಎಸ್‌ಐ, ಮನೆ ಕಟ್ಟುವ ಸಹಾಯ ಜಾರಿಗೊಳಿಸಲು ಹಾಗೂ ಮರಳು ಸಮಸ್ಯೆಯನ್ನು ಬಗೆಹರಿಸಲು ಆಗ್ರಹಿಸಿ ನಿರ್ಣಯ ಮಂಡಿಸಿ ಹೋರಾಟ ನಡೆಸಲು ತೀರ್ಮಾನಿಸಲಾಯಿತು.

ಮುಂದಿನ ಅವಧಿಗೆ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಯು.ದಾಸಭಂಡಾರಿ, ಉಪಾಧ್ಯಕ್ಷರಾಗಿ ಸಂತೋಷ ಹೆಮ್ಮಾಡಿ, ರಾಮಚಂದ್ರ ನಾವಡ, ಚಿಕ್ಕ ಮೊಗವೀರ, ಶ್ರೀನಿವಾಸ ಪೂಜಾರಿ, ಪಿ.ಟಿ.ಅಲೆಕ್ಸ್, ಸುರೇಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕಾರ್ಯ ದರ್ಶಿಗಳಾಗಿ ಅರುಣ್ ಕುಮಾರ್, ವಿಜೇಂದ್ರ, ಪ್ರಶಾಂತ್ ಸಳ್ವಾಡಿ, ಅನಂತ ಕುಲಾಲ್, ರೇಣುಕಾ, ನೀಲಾ ಗುಲ್ವಾಡಿ, ಕೋಶಾಧಿಕಾರಿಯಾಗಿ ಜಗದೀಶ್ ಆಚಾರ್ ಹೆಮ್ಮಾಡಿ ಆಯ್ಕೆಯಾದರು. ಸಂತೋಷ ಹೆಮ್ಮಾಡಿ ಸ್ವಾಗತಿಸಿದರು. ಅರುಣ್ ಕುಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News