×
Ad

ಮಾಲೆಗಾಂವ್ ಸ್ಫೋಟ ಪ್ರಕರಣ: ವಿಚಾರಣೆಗೆ ಹಾಜರಾದ ಸಂಸದೆ ಪ್ರಜ್ಞಾ ಸಿಂಗ್

Update: 2021-01-04 20:23 IST

ಮುಂಬೈ, ಜ.4: 2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಹಾಗೂ ಇತರ 4 ಆರೋಪಿಗಳು ಸೋಮವಾರ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾದರು. ಕಳೆದ ತಿಂಗಳು ಪ್ರಜ್ಞಾ ಸಿಂಗ್ ಎರಡು ಬಾರಿ ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಬಗ್ಗೆ ಅಸಮಾಧಾನ ಸೂಚಿಸಿದ್ದ ವಿಶೇಷ ನ್ಯಾಯಾಧೀಶ ಪಿಆರ್ ಸಿತ್ರೆ, ಜನವರಿ 4ರಂದು ಅಂತಿಮ ಅವಕಾಶ ನೀಡುವುದಾಗಿ ಹೇಳಿದ್ದರು.

ನ್ಯಾಯಾಲಯದಲ್ಲಿ ಹಾಜರಾದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪ್ರಜ್ಞಾ ಸಿಂಗ್ ‘ಕಾಂಗ್ರೆಸ್ ನೀಡಿದ್ದ ಚಿತ್ರಹಿಂಸೆಯಿಂದ ಇನ್ನೂ ನಾನು ಚೇತರಿಸಿಕೊಂಡಿಲ್ಲ. ನನ್ನನ್ನು ಮುಗಿಸಿಬಿಡಲು ಅವರು ಯೋಚಿಸಿದ್ದರು. ಈಗಲೂ ಚಿಕಿತ್ಸೆ ಮುಂದುವರಿದಿರುವ ಕಾರಣ ಕಳೆದ ತಿಂಗಳು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ನ್ಯಾಯಾಲಯದ ಆದೇಶವನ್ನು ನಾನು ಪಾಲಿಸುತ್ತೇನೆ’ ಎಂದರು.

ಕೊರೋನ ಲಸಿಕೆಯ ಬಗ್ಗೆ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿಕೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಪ್ರಜ್ಞಾಸಿಂಗ್ ‘ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮದೇ ಪ್ರತ್ಯೇಕ ಲಸಿಕೆ ತಯಾರಿಸುತ್ತವೆ. ಕೆಲವರು ಕಾಂಗ್ರೆಸ್ ಲಸಿಕೆ ತಯಾರಿಸಿದರೆ ಸಮಾಜವಾದಿ ಪಕ್ಷ, ಎಡಪಕ್ಷಗಳೂ ತಮ್ಮದೇ ಸ್ವಂತ ಲಸಿಕೆ ತಯಾರಿಸಲಿವೆ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News