ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬೆಂಗಾವಲು ವಾಹನದ ಮೇಲೆ ದಾಳಿ
ರಾಂಚಿ, ಜ. 4: ಅತ್ಯಾಚಾರ ಹಾಗೂ ಹತ್ಯೆ ಘಟನೆ ಖಂಡಿಸಿ ಧರಣಿ ನಡೆಸುತ್ತಿದ್ದ ಗುಂಪೊಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ ಘಟನೆ ರಾಂಚಿಯ ಒರ್ಮಾಂಝಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿವಾರ ನಡೆದಿದೆ.
ರವಿವಾರ ಸಂಜೆ ತನ್ನ ಅಧಿಕೃತ ನಿವಾಸದತ್ತ ತೆರಳುತ್ತಿದ್ದಾಗ ಪ್ರತಿಭಟನಾಕಾರರ ಗುಂಪು ಕಿಶೋರ್‌ಗಂಜ್ ಚೌಕ್‌ನಲ್ಲಿ ಕಾಯುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಾಹನದಲ್ಲಿದ್ದ ಕೆಲವು ಪ್ರತಿಭಟನಾಕಾರರು ಬೆಂಗಾವಲು ವಾಹನಗಳ ಮೇಲೆ ದಾಳಿ ನಡೆಸಿದರು ಹಾಗೂ ಹಾನಿ ಉಂಟು ಮಾಡಿದರು. ದಾಳಿಯಲ್ಲಿ ಪಾಲ್ಗೊಂಡವರನ್ನು ಗುರುತಿಸಲಾಗುವುದು. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
‘‘ಒರ್ಮಾಂಝಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದರು. ಮುಖ್ಯಮಂತ್ರಿ ಅವರ ಬೆಂಗಾವಲು ವಾಹನದ ಮೇಲೆ ನಡೆದ ದಾಳಿಯ ಹಿಂದಿರುವವರನ್ನು ಇನ್ನಷ್ಟೇ ಗುರುತಿಸಬೇಕಾಗಿದೆ’’ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.