ಪಾವಂಜೆ: ನದಿಗೆ ಬಿದ್ದ ಕಾರು; ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

Update: 2021-01-05 07:24 GMT

ಹಳೆಯಂಗಡಿ, ಜ.5: ರಾಷ್ಟ್ರೀಯ ಹೆದ್ದಾರಿ 66ರ ಪಾವಂಜೆ ಸೇತುವೆ ಬಳಿ ನಂದಿನಿ ನದಿ ತೀರದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಘಟನೆ ಮಂಗಳವಾರ ಇಂದು ಬೆಳಗ್ಗೆ ನಡೆದಿದೆ.

ಘಟನೆಯ ವೇಳೆ ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದು, ಯಾವುದೇ ಪ್ರಾಣಾಪಾಯವಿಲ್ಲದೆ ಅವರು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಕೃಷ್ಣಾಪುರ ಕಾಟಿಪಳ್ಳದ ನಿವಾಸಿ ಅಶ್ರಫ್ ಎಂಬವರು ತನ್ನ ಸ್ನೇಹಿತನೊಂದಿಗೆ ಪಾವಂಜೆ ಬಳಿಯ ಅರಾಂದ್ ಎಂಬ ಸ್ಥಳಕ್ಕೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಪಾವಂಜೆ ಸೇತುವೆ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ನಂದಿನಿ ನದಿಗೆ ಇಳಿದಿದೆ. ಕಾರು ನದಿಯಲ್ಲಿ ಮುಳುಗುತ್ತಿದ್ದಂತೆ ಅಶ್ರಫ್ ಮತ್ತು ಅವರ ಸ್ನೇಹಿತ ಕಾರಿನಿಂದ ಹೊರಬಂದು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಾಯದಿಂದ ಕ್ರೇನ್ ಮೂಲಕ ಕಾರನ್ನು ನದಿಯಿಂದ ಮೇಲೆತ್ತಲು ವ್ಯವಸ್ಥೆ ಕಲ್ಪಿಸಿದರು.

ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News