ಮಂಗಳೂರಿನ ಬ್ಲಡ್‌ಬ್ಯಾಂಕ್‌ಗಳಲ್ಲಿ ರಕ್ತ, ಪ್ಲೇಟ್‌ಲೆಟ್ ಗಳ ತೀವ್ರ ಕೊರತೆ

Update: 2021-01-05 07:47 GMT

ಮಂಗಳೂರು, ಜ.5: ನಗರದ ರೆಡ್‌ಕ್ರಾಸ್ ಸೇರಿದಂತೆ ವಿವಿಧ ಆಸ್ಪತ್ರೆಗಳ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತದ ಕೊರತೆ ಎದುರಾಗಿದ್ದು, ಬ್ಲಡ್‌ಬ್ಯಾಂಕ್‌ಗಳು ಸದ್ಯ ರಕ್ತದಾನ ನಡೆಸುವಂತಹ ಸಂಘಟನೆಗಳು, ರೋಗಿಗಳ ಸಂಬಂಧಿಕರಿಂದಲೇ ರಕ್ತದ ಬೇಡಿಕೆಯನ್ನು ಪೂರೈಸುವಂತ ಪರಿಸ್ಥಿತಿ ಎದುರಾಗಿದೆ.

ಪ್ಲಾಸ್ಮಾ, ಪ್ಲೇಟ್‌ಲೆಟ್ ಸೇರಿದಂತೆ ವಿವಿಧ ಗುಂಪಿನ ರಕ್ತವನ್ನು ನಗರದ ಪ್ರಮುಖ ಆಸ್ಪತ್ರೆಯಾದ ವೆನ್ಲಾಕ್, ಲೇಡಿಗೋಶನ್ ಮಾತ್ರವಲ್ಲದೆ, ಇತರ ಆಸ್ಪತ್ರೆಗಳ ಬ್ಲಡ್‌ಬ್ಯಾಂಕ್‌ಗಳಿಗೆ ಪೂರೈಕೆ ಮಾಡುವ ಲೇಡಿಗೋಶನ್‌ನ ನಗರದ ಪ್ರಮುಖ ಬ್ಲಡ್ ಬ್ಯಾಂಕ್ ಆದ ರೆಡ್‌ಕ್ರಾಸ್‌ನಲ್ಲೂ ಪ್ಲೇಟ್‌ಲೆಟ್ ಇಲ್ಲದೆ ಜಿಲ್ಲೆಯ ಹೊರಗಿನ ಬ್ಲಡ್‌ಬ್ಯಾಂಕ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ.

ಜಿಲ್ಲೆಯಲ್ಲಿ ಬಹುತೇಕವಾಗಿ ರವಿವಾರ ಒಂದಿಲ್ಲೊಂದು ಸಂಘಟನೆಗಳು ರಕ್ತದಾನ ಶಿಬಿರದ ಮೂಲಕ ರಕ್ತ ಸಂಗ್ರಹಿಸಿ ರೆಡ್‌ಕ್ರಾಸ್ ಅಥವಾ ಆಸ್ಪತ್ರೆಯ ಬ್ಲಡ್‌ಬ್ಯಾಂಕ್‌ಗಳಿಗೆ ಒದಗಿಸುತ್ತವೆ. ಆದರೆ ಕಳೆದ ವಾರ ಇಂತಹ ಶಿಬಿರ ನಡೆಯದೆ ಯಾವುದೇ ಬ್ಲಡ್ ಬ್ಯಾಂಕ್‌ಗಳಿಗೆ ರಕ್ತ ಪೂರೈಕೆ ಆಗಿಲ್ಲ. ಇದರಿಂದಾಗಿ ಪ್ಲಾಸ್ಮಾ, ಪ್ಲೇಟ್‌ಲೆಟ್ ಕೊರತೆಯಾಗಿದೆ ಎಂದು ಹೇಳಲಾಗುತ್ತಿದೆ.

ನಗರದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿಯೂ ರಕ್ತ ಹಾಗೂ ಪ್ಲೇಟ್‌ಲೆಟ್‌ಗಳ ಕೊರತೆ ಉಂಟಾಗಿದ್ದು, ಸದ್ಯ ರೋಗಿಗಳ ಸಂಬಂಧಿಕರಿಂದಲೇ ರಕ್ತ ಪೂರೈಕೆಗೆ ವ್ಯವಸ್ಥೆ ಮಾಡುವ ಮೂಲಕ ಆಸ್ಪತ್ರೆಗಳು ಕೊರತೆಯನ್ನು ಸರಿದೂಗಿಸಲು ಪ್ರಯತ್ನಿಸುತ್ತಿವೆ. ಹಾಗಿದ್ದರೂ ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆ ಆಸ್ಪತ್ರೆಗಳನ್ನು ಕಾಡಬಹುದಾದ್ದರಿಂದ ಬ್ಲಡ್‌ಬ್ಯಾಂಕ್‌ಗಳಿಂದ ಸಂಘಟನೆಗಳು, ವೈಯಕ್ತಿಕ ನೆಲೆಯಲ್ಲಿ ರಕ್ತದಾನಕ್ಕೆ ಕರೆ ಮಾಡಿ ರಕ್ತ ಸಂಗ್ರಹಿಸಲಾಗುತ್ತಿದೆ. ಕೊರೋನ, ಲಾಕ್‌ಡೌನ್ ಸಂದರ್ಭದಲ್ಲೂ ತುರ್ತು ರಕ್ತದಾನ ಶಿಬಿರಗಳ ಮೂಲಕ ಜಿಲ್ಲೆಯಲ್ಲಿ ರಕ್ತದಾನದ ಕೊರತೆ ಎದುರಾಗದಂತೆ ಜಿಲ್ಲಾಡಳಿತದ ಸಹಕಾರದೊಂದಿಗೆ ರೆಡ್‌ಕ್ರಾಸ್ ಮುತುವರ್ಜಿ ವಹಿಸಿತ್ತು. ಆದರೆ ಇತ್ತೀಚಿನ ಒಂದೆರಡು ವಾರಗಳಲ್ಲಿ ರಕ್ತದಾನ ಶಿಬಿರಗಳು ನಡೆಯದ ಕಾರಣ, ಮಾತ್ರವಲ್ಲದೆ ಕಾಲೇಜುಗಳು ಇನ್ನೂ ಸಂಪೂರ್ಣವಾಗಿ ಆರಂಭಗೊಳ್ಳದ ಕಾರಣ ರಕ್ತದ ಕೊರತೆ ಎದುರಾಗಿದೆ ಎನ್ನಲಾಗಿದೆ.

‘‘ರೆಡ್‌ಕ್ರಾಸ್‌ನಲ್ಲಿ ಬಹುತೇಕವಾಗಿ ರಕ್ತ ಸಂಗ್ರಹವಿರುತ್ತದೆ. ಸದ್ಯ ಬ್ಲಡ್‌ಬ್ಯಾಂಕ್‌ನಲ್ಲಿ ಸುಮಾರು 60 ಯುನಿಟ್‌ನಲ್ಲಿ ಸಂಗ್ರಹವಿದೆ. ಆದರೆ ಈ ರಕ್ತವು ಲೇಡಿಗೋಶನ್ ಆಸ್ಪತ್ರೆಯ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಉಚಿತವಾಗಿ ನೀಡುವ ಸಂಗ್ರಹವಾಗಿದೆ. ಲೇಡಿಗೋಶನ್ ವೊಂದಕ್ಕೆ ರೆಡ್‌ಕ್ರಾಸ್‌ನಿಂದ ಕನಿಷ್ಠ 20ರಿಂದ 30 ಯುನಿಟ್‌ನಷ್ಟು ರಕ್ತದ ಅಗತ್ಯವಿರುತ್ತದೆ. ರೆಡ್‌ಕ್ರಾಸ್‌ನಲ್ಲಿ ಪ್ಲೇಟ್‌ಲೆಟ್‌ನ ಜತೆಗೆ ನೆಗೆಟಿವ್ ಮಾದರಿಯ ರಕ್ತದ ಕೊರತೆಯೂ ಇದೆ’’ ಎನ್ನುತ್ತಾರೆ ಲೇಡಿಗೋಶನ್ ಆಸ್ಪತ್ರೆಯ ರೆಡ್‌ಕ್ರಾಸ್ ಬ್ಲಡ್‌ಬ್ಯಾಂಕ್ ಸಂಯೋಜಕ ಪ್ರವೀಣ್.

ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್‌ನಲ್ಲಿಯೂ ರಕ್ತ ಹಾಗೂ ಪ್ಲೇಟ್‌ಲೆಟ್ ಕೊರತೆ ಇದೆ ಎನ್ನುತ್ತಾರೆ ಅಲ್ಲಿನ ಬ್ಲಡ್‌ಬ್ಯಾಂಕ್‌ನ ಆ್ಯಂಟನಿ.


‘‘ಕೆಲ ದಿನಗಳಿಂದ ರಕ್ತದಾನ ಶಿಬಿರ ನಡೆಯದೆ, ಇನ್ನೂ ಪದವಿ ಕಾಲೇಜುಗಳು ಸಮರ್ಪಕವಾಗಿ ಆರಂಭಗೊಳ್ಳದೆ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತದ ಕೊರತೆ ಎದುರಾಗಿದೆ. ಈಗಾಗಲೇ ರೆಡ್‌ಕ್ರಾಸ್‌ನಿಂದ ಮೂಡುಬಿದಿರೆಯ ಘಟಕ ಸೇರಿದಂತೆ ವಿವಿಧ ಕಡೆಗಳಲ್ಲಿ ರಕ್ತದಾನಿಗಳ ಮೂಲಕ ರಕ್ತ ಸಂಗ್ರಹಕ್ಕೆ ಮನವಿ ಮಾಡಲಾಗಿದೆ. ಎಲ್ಲಿಯೂ ಸಿಗದಿದ್ದರೂ ರೆಡ್‌ಕ್ರಾಸ್‌ನ ಬ್ಲಡ್‌ಬ್ಯಾಂಕ್‌ನಲ್ಲಿ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ರೆಡ್‌ಕ್ರಾಸ್ ಸೇರಿದಂತೆ ಜಿಲ್ಲೆಯಲ್ಲಿ ಪ್ಲೇಟ್‌ಲೆಟ್ ಇಲ್ಲದೆ ಇಂದು ಅಪಘಾತಕ್ಕೀಡಾದವರಿಗೆ ಕುಂದಾಪುರದಿಂದ ಪ್ಲೇಟ್‌ಲೆಟ್ ಬೇಡಿಕೆ ಸಲ್ಲಿಸಲಾಗಿದೆ. ಅಲ್ಲಿಯೂ ಇದೆಯೋ ಗೊತ್ತಿಲ್ಲ. ಕೊರೋನ ತೀವ್ರತೆರನಾಗಿ ಜಿಲ್ಲೆಯನ್ನು ಬಾಧಿಸಿದ್ದ ಸಂದರ್ಭದಲ್ಲಿಯೂ ಬ್ಲಡ್‌ಬ್ಯಾಂಕ್‌ಗಳಲ್ಲಿ ರಕ್ತದ ಕೊರತೆ ಆಗದಂತೆ ಕ್ರಮ ವಹಿಸಲಾಗಿತ್ತು. ಸಂಘಟನೆಗಳಿಂದಲೂ ರಕ್ತದಾನ ಶಿಬಿರ, ರಕ್ತದಾನಿಗಳ ಮೂಲಕ ಈ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ. ’’
-ಪ್ರಭಾಕರ ಶರ್ಮ, ಕಾರ್ಯದರ್ಶಿ, ರೆಡ್‌ಕ್ರಾಸ್, ದ.ಕ.
 


‘‘ನಮ್ಮಲ್ಲಿಯೂ ವಿವಿಧ ಗುಂಪಿನ ರಕ್ತ ಹಾಗೂ ಪ್ಲೇಟ್‌ಲೆಟ್ ಕೊರತೆಯಿಂದ ಸಮಸ್ಯೆ ಉಂಟಾಗುತ್ತಿದೆ. ಸದ್ಯ ರೋಗಿಗಳ ಸಂಬಂಧಿಕರು ಹಾಗೂ ವೈಯಕ್ತಿಕ ನೆಲೆಯಲ್ಲಿ ರಕ್ತದಾನಿಗಳಿಗೆ ಕರೆ ಮಾಡಿ ರಕ್ತ ಸಂಗ್ರಹಿಸಿ ಕೊರತೆ ನೀಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಳೆದ ವಾರ ಗ್ರಾಪಂ ಚುನಾವಣೆ ಹಾಗೂ ಇತರ ಕಾರಣಗಳಿಂದ ಕೆಲವೊಂದು ರಕ್ತದಾನ ಶಿಬಿರಗಳು ರದ್ದುಗೊಂಡ ಕಾರಣ ಈ ಸಮಸ್ಯೆ ಉಂಟಾಗಿದೆ. ನಮ್ಮ ಬ್ಲಡ್ ಬ್ಯಾಂಕ್‌ನಲ್ಲಿ ದಿನವೊಂದಕ್ಕೆ 50ರಿಂದ 60 ಯುನಿಟ್ ರಕ್ತದ ಬೇಡಿಕೆ ಇರುತ್ತದೆ’’.
-ಭವಾನಿ ಶಂಕರ್, ಕಾರ್ಯನಿರ್ವಾಹಕರು, ಬ್ಲಡ್‌ಬ್ಯಾಂಕ್, ಕೆಎಂಸಿ ಮಂಗಳೂರು.


ರಕ್ತದಾನ ಮತ್ತೆ ಚುರುಕು ಪಡೆಯಬೇಕಿದೆ

ಒಬ್ಬ ಆರೋಗ್ಯವಂತ ಮಾಡುವ ಒಂದು ಯುನಿಟ್ ರಕ್ತದಾನದಿಂದ ಪ್ಲಾಸ್ಮಾ, ಪ್ಲೇಟ್‌ಲೆಟ್ ಮಾತ್ರವಲ್ಲದೆ ರಕ್ತದ ಮೂಲಕ ಹಲವು ರೋಗಿಗಳಿಗೆ ಜೀವದಾನ ಮಾಡಲು ಸಾಧ್ಯವಿದೆ. ದ.ಕ. ಜಿಲ್ಲೆಯಲ್ಲೂ ರಕ್ತದಾನಿಗಳಿಗೆ ಯಾವುದೇ ಕೊರತೆ ಇಲ್ಲ. ನೂರಾರು ಸಂಘಟನೆಗಳು ಯಾವುದೇ ಫಲಾಪೇಕ್ಷೆಯಿಲ್ಲದೆ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆಯನ್ನು ನೀಡುತ್ತಾ ಬಂದಿವೆ. ಇದೀಗ ಜಿಲ್ಲೆಯಲ್ಲಿ ಉಂಟಾಗಿರುವ ಈ ರಕ್ತದ ಕೊರತೆಯನ್ನು ನೀಗಿಸುವಲ್ಲಿ ರಕ್ತದಾನಿಗಳು ಮುಂದಾಗುತ್ತಾರೆಂಬ ಭರವಸೆಯೂ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News