×
Ad

ರಿಲಯನ್ಸ್ ಜಿಯೊ ಟವರ್‌ಗಳಿಗೆ ಹಾನಿ: ಪಂಜಾಬ್, ಕೇಂದ್ರ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2021-01-05 22:55 IST

ಚಂಡಿಗಢ, ಜ. 5: ಪಂಜಾಬ್‌ನಲ್ಲಿ ತನ್ನ ಟೆಲಿಕಾಂ ಗೋಪುರಕ್ಕೆ ಹಾನಿ ಉಂಟು ಮಾಡಿರುವ ಹಾಗೂ ರಾಜ್ಯದಲ್ಲಿ ಮಳಿಗೆಗಳನ್ನು ಬಲವಂತವಾಗಿ ಮುಚ್ಚಿಸಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ರಿಲಯನ್ಸ್ ಜಿಯೋ ಇನ್‌ಫೋಕಾಂ ಲಿಮಿಟೆಡ್ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯ ಮಂಗಳವಾರ ಪಂಜಾಬ್ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಸಂದರ್ಭ ಪಂಜಾಬ್‌ನಲ್ಲಿ 1,500ಕ್ಕೂ ಅಧಿಕ ಮೊಬೈಲ್ ಗೋಪುರಗಳಿಗೆ ಹಾನಿ ಎಸಗಲಾಗಿದೆ.

ತನ್ನ ವಿರುದ್ಧ ‘ಸುಳ್ಳು ಸುದ್ದಿ’ ಹರಡಿಸುವುದರಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ತೊಡಗಿಸಿಕೊಂಡಿವೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆ ರಿಲಾಯನ್ಸ್ ಜಿಯೊ ಸೋಮವಾರ ಸಲ್ಲಿಸಿದ ಮನವಿಯಲ್ಲಿ ಹೇಳಿದೆ. ಕಾರ್ಪೋರೇಟ್ ಅಥವಾ ಗುತ್ತಿಗೆ ಕೃಷಿಗೆ ಪ್ರವೇಶಿಸಲು ತನ್ನ ಮಾತೃಸಂಸ್ಥೆ ಹಾಗೂ ಅಂಗ ಸಂಸ್ಥೆ ಯಾವುದೇ ಯೋಜನೆ ಹೊಂದಿಲ್ಲ ಎಂದು ದೂರುದಾರರು ಹೇಳಿದ್ದಾರೆ.

ಫೆ.8 ರಂದು ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ಸುಧೀರ್ ಮಿತ್ತಲ್ ಅವರು ಪಂಜಾಬ್ ಸರಕಾರ ಹಾಗೂ ಕೇಂದ್ರ ಸರಕಾರಗಳಿಗೆ ನಿರ್ದೇಶನ ನೀಡಿದ್ದಾರೆ.

ಪ್ರಕರಣದಲ್ಲಿ ರಿಲಾಯನ್ಸ್ ಜಿಯೊ ಮುಖ್ಯ ಕಾರ್ಯದರ್ಶಿ ಮೂಲಕ ಪಂಜಾಬ್ ರಾಜ್ಯ, ಕೇಂದ್ರ ಗೃಹ ಸಚಿವಾಲಯ, ಟೆಲಿಕಮ್ಯೂನಿಕೇಷನ್ ಇಲಾಖೆ ಹಾಗೂ ಪಂಜಾಬ್‌ನ ಡಿಜಿಪಿಯನ್ನು ಪ್ರತಿವಾದಿಯನ್ನಾಗಿ ಮಾಡಿದೆ.

ತನ್ನ ವಿರುದ್ಧ ದುಷ್ಕರ್ಮಿಗಳು ಹಾಗೂ ಸ್ಥಾಪಿತ ಹಿತಾಸಕ್ತಿಗಳು ನಡೆಸಿದ ತಪ್ಪು ಮಾಹಿತಿ ಪ್ರಸಾರ ಅಭಿಯಾನ ಹಾಗೂ ಷಡ್ಯಂತ್ರದ ತನಿಖೆ ನಡೆಸಲು ಪ್ರತಿಪಾದಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ರಿಟ್ ಅರ್ಜಿಯಲ್ಲಿ ರಿಲಾಯನ್ಸ್ ಜಿಯೋ ಕೋರಿದೆ.

ಪಂಜಾಬ್‌ನಲ್ಲಿ ಕಳೆದ ಒಂದು ವಾರಗಳಲ್ಲಿ ದುಷ್ಕರ್ಮಿಗಳು 1,500ಕ್ಕೂ ಅಧಿಕ ಟೆಲಿಕಾಂ ಗೋಪುರಗಳಿಗೆ ಹಾನಿ ಉಂಟು ಮಾಡಿದರು ಹಾಗೂ ನಿಷ್ಕ್ರಿಯಗೊಳಿಸಿದರು ಎಂದು ದೂರಿನಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News