×
Ad

ಇದೊಂದು ಪ್ರಯೋಗ ಎಂದು ನಮಗೆ ಯಾರೂ ಹೇಳಲಿಲ್ಲ: ಕೊರೋನ ಲಸಿಕೆ ಸ್ವೀಕರಿಸಿದ ಭೋಪಾಲ್ ಜನರ ಆರೋಪ

Update: 2021-01-05 23:05 IST

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ಕೊರೋನ ವೈರಸ್ ಲಸಿಕೆಯ ಪ್ರಯೋಗಗಳು ಹೊಸ ವಿವಾದಕ್ಕೆ ಸಿಲುಕಿವೆ. ತಮ್ಮ ಒಪ್ಪಿಗೆ ಇಲ್ಲದೆ, ದಾರಿ ತಪ್ಪಿಸಿ ಪ್ರಯೋಗ ಲಸಿಕೆಯನ್ನು ನೀಡಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ.

ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದ್ದ ಲಸಿಕೆ ಪ್ರಯೋಗಗಳಲ್ಲಿ ಪಾಲ್ಗೊಳ್ಳಲು ತಮ್ಮನ್ನು ದಾರಿ ತಪ್ಪಿಸಲಾಗಿದೆ ಎಂದು ಒಂದು ಡಜನ್ ಗೂ ಹೆಚ್ಚು ಜನರು NDTVಗೆ ತಿಳಿಸಿದ್ದಾರೆ.

ನಮಗೆ ಯಾರೂ ಕೂಡ ಲಸಿಕೆ ಪ್ರಯೋಗದ ಕುರಿತು ಅಥವಾ ಅದರ ಅಪಾಯದ ಬಗ್ಗೆ ಮಾಹಿತಿ ನೀಡಿರಲಿಲ್ಲ. ಚುಚ್ಚುಮದ್ದು ಕೋವಿಡ್ ನ್ನು ತಡೆಗಟ್ಟುತ್ತದೆ ಎಂದು ಮಾತ್ರ ಹೇಳಿದ್ದಾರೆ.ಇಂತಹ ಟ್ರಯಲ್ಸ್ ಗೆ ಕಡ್ಡಾಯವಾಗಿರುವ ಒಪ್ಪಿಗೆಯ ಅರ್ಜಿ ನಮೂನೆಯನ್ನು ನೀಡಿಲ್ಲ ಎಂದು ಜನರು ದೂರಿದ್ದಾರೆ.

“ಯಾವುದೇ ಅಡ್ಡ ಪರಿಣಾಮದ ಬಗ್ಗೆ ಯಾರೂ ನನಗೆ ಹೇಳಲಿಲ್ಲ. ಮಾಹಿತಿಯುಕ್ತ ಒಪ್ಪಿಗೆ ಫಾರ್ಮ್ ನ್ನು ಯಾರೂ ನನಗೆ ನೀಡಿಲ್ಲ. ಆಸ್ಪತ್ರೆಯಿಂದ ನನಗೆ ಯಾವತ್ತೂ ಕರೆ ಬಂದಿಲ್ಲ. ಈ ಚುಚ್ಚುಮದ್ದನ್ನು ತೆಗೆದುಕೊಂಡರೆ ನನಗೆ ಕೊರೋನ ಬರುವುದಿಲ್ಲ ಎಂದು ಆಸ್ಪತ್ರೆಯವರು ಹೇಳಿದ್ದರು'' ಎನ್ನುವುದಾಗಿ ಭೋಪಾಲ್ ನ ಒರಿಯಾ ಬಸ್ತಿಯ ರೇಖಾ ಹೇಳಿದರು.

"ನಾವು ಕೊರೋನ ಲಸಿಕೆ ನೀಡುತ್ತಿದ್ದೇವೆ ಎಂದು ಅವರು ಹೇಳಿದರು. ಇದು ಒಂದು ಪ್ರಯೋಗ ಎಂದು ಯಾರೂ ನಮಗೆ ಹೇಳಲಿಲ್ಲ. ನಿಮಗೆ ಏನಾದರೂ ಸಮಸ್ಯೆಯಾದರೆ ನಮಗೆ ಕರೆ ಮಾಡಿ ಎಂದು ಆಸ್ಪತ್ರೆಯವರು ನಮಗೆ ಹೇಳಿದ್ದರು' ಎಂದು ಡಿ.8ರಂದು ಮೊದಲ ಡೋಸ್ ಪಡೆದಿದ್ದ ಶಂಕರ ನಗರದ ಸಾವಿತ್ರಿ ಹೇಳಿದ್ದಾರೆ.

"ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ನಡೆಸುತ್ತಾರೆ ಎಂದು ನನ್ನ ಸ್ನೇಹಿತ ಹೇಳಿದ. ಹೀಗಾಗಿ ನಾನು ಅರ್ಜಿಯೊಂದಕ್ಕೆ ಸಹಿ ಹಾಕಿದ್ದೆ. ಕೆಲವು ಸಮಯದ ಬಳಿಕ ನನಗೆ ಲಸಿಕೆ ನೀಡಲಾಗಿತ್ತು. ಕೆಲವೇ ದಿನಗಳಲ್ಲಿ ನನಗೆ ವಾಂತಿ ಆರಂಭವಾಯಿತು. ಜ್ವರ ಬಂತು. ಕೆಲಸಕ್ಕೂ ಹೋಗಲು ಸಾಧ್ಯವಾಗಲಿಲ್ಲ. ಇದೊಂದು ಟ್ರಯಲ್ ಎಂದು ಯಾರೂ ಹೇಳಲಿಲ್ಲ'' ಎಂದು ದಿನಗೂಲಿಯಾಗಿ ಕೆಲಸ ಮಾಡುತ್ತಿರುವ 37 ವರ್ಷದ ಜಿತೇಂದ್ರ ಹೇಳಿದ್ದಾರೆ

"ನಾವು ಎಲ್ಲ ನಿಯಮಗಳನ್ನು ಪಾಲಿಸಿದ್ದೇವೆ. ಐಸಿಎಂ ಆರ್ ಮಾರ್ಗಸೂಚಿಯನ್ವಯ ಟ್ರಯಲ್ಸ್ ನಡೆಸಿದ್ದೇವೆ. ಟ್ರಯಲ್ಸ್ ನಲ್ಲಿ ಭಾಗವಹಿಸಿದವರಿಗೆ ಅರ್ಧಗಂಟೆ ಮೊದಲೇ ಆಪ್ತ ಸಮಾಲೋಚನೆ ನಡೆಸಿದ್ದೆವು. ಆಗ ಅವರಿಗೆ ಡೋಸ್ ಗಳು ಹಾಗೂ ಅದರ ಅಡ್ಡ ಪರಿಣಾಮಗಳ ಬಗ್ಗೆ ತಿಳಿಸಲಾಗುತ್ತದೆ'' ಎಂದು ಕಾಲೇಜ್ ಆಫ್ ಮೆಡಿಕಲ್ ಸೈಯನ್ಸ್ ಡೀನ್ ಡಾ. ಎಕೆ ದೀಕ್ಷಿತ್ ಹೇಳಿದ್ದಾರೆ.

ಈ ವಿಚಾರವನ್ನು ತನಿಖೆ ನಡೆಸಲಾಗುವುದು ಎಂದಿರುವ ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್, ಈ ಆರೋಪದ ಹಿಂದೆ ರಾಜಕೀಯ ವಿದೆ ಎಂದಿದ್ದಾರೆ. "ನಮ್ಮ ವಿಜ್ಞಾನಿಗಳು ಲಸಿಕೆಯನ್ನು ತಯಾರಿಸಿದ್ದಾರೆ. ಟುಕ್ಡೇ ಟುಕ್ಟೇ ಗ್ಯಾಂಗ್ ಇದನ್ನು ವಿರೋಧಿಸುತ್ತಿದೆ'' ಎಂದು ಸಾರಂಗ್ NDTVಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News