ಹಕ್ಕಿ ಜ್ವರ ರಾಜ್ಯ ವಿಪತ್ತು: ಕೇರಳ ಸರಕಾರ ಘೋಷಣೆ

Update: 2021-01-05 17:36 GMT

ತಿರುವನಂತಪುರ, ಜ. 5: ಹಕ್ಕಿ ಜ್ವರ ರಾಜ್ಯ ವಿಪತ್ತು ಎಂದು ಕೇರಳ ಸರಕಾರ ಘೋಷಿಸಿದೆ. ಹಕ್ಕಿಜ್ವರ ಮೊದಲು ಪತ್ತೆಯಾದ ಕೊಟ್ಟಾಯಂ ಹಾಗೂ ಆಲಪ್ಪುಳ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಘೋಷಿಸಲಾಗಿದೆ.

ಉಭಯ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಬಾತುಕೋಳಿಯ ಮಾದರಿಗಳನ್ನು ಪರೀಕ್ಷಿಸಿದಾಗ ಮೊದಲ ಬಾರಿಗೆ ಹಕ್ಕಿ ಜ್ವರ ಪತ್ತೆಯಾಗಿತ್ತು. ಆದರೆ, ಈ ರೋಗ ಜನರಿಗೆ ವರ್ಗಾವಣೆಗೊಂಡಿರಲಿಲ್ಲ.

ಬಾತುಕೋಳಿ ಸಾಕಣೆ ಕೇಂದ್ರವೊಂದರಲ್ಲಿ ರೋಗದಿಂದ ಸರಿಸುಮಾರು 1,650 ಬಾತುಕೋಳಿಗಳು ಸಾವನ್ನಪ್ಪಿದ ಬಳಿಕ ಕೊಟ್ಟಾಯಂನ ನೀಂದೂರು ಪಂಚಾಯತ್‌ನಲ್ಲಿ ಹಕ್ಕಿ ಜ್ವರ ದೃಢಪಟ್ಟಿತ್ತು. ಆದರೆ, ದುರ್ಗಮ ಪ್ರದೇಶದಲ್ಲಿ ಇದ್ದುದರಿಂದ ಹರಡುವ ಸಾಧ್ಯತೆ ಇರಲಿಲ್ಲ. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಈ ಜಿಲ್ಲೆಗೆ 5 ಸದಸ್ಯರ 8 ತಂಡಗಳನ್ನು ನಿಯೋಜಿಸಲಾಗಿತ್ತು.

ಕುಟ್ಟನಾಡು ಹಾಗೂ ಆಲಪ್ಪುಳ ಪ್ರದೇಶದಲ್ಲಿ ಕೂಡ ಹಕ್ಕಿ ಜ್ವರ ಕಂಡು ಬಂದಿದೆ. ತಲವಾಡಿ, ಇಡಾತ್ವ, ಪಲ್ಲಿಪಾಡ್ ಹಾಗೂ ತಳಕ್ಕರ ಪಂಚಾಯತ್‌ನಲ್ಲಿ ಹಕ್ಕಿ ಜ್ವರ ಹರಡಿದೆ. ಹಲವು ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ. ಕ್ಷಿಪ್ರ ಕಾರ್ಯಪಡೆಯನ್ನು ನಿಯೋಜಿಸಲಾಗಿದೆ.

ರೋಗ ನಿಯಂತ್ರಿಸಲು ಹಕ್ಕಿ ಜ್ವರ ಕಂಡು ಬಂದ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಲ್ಲಾ ಹಕ್ಕಿಗಳನ್ನು ಕೊಲ್ಲಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾಕು ಪಕ್ಷಿಗಳನ್ನು ಸೇರಿದಂತೆ ಸುಮಾರು 48 ಸಾವಿರ ಪಕ್ಷಿಗಳನ್ನು ನಾಶಮಾಡಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ರೈತರಿಗೆ ನಷ್ಟ ಪರಿಹಾರ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ವನ್ಯ ಜೀವಿ ಖಾತೆಯ ಸಚಿವ ಕೆ. ರಾಜು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News