ತುರ್ತು ಬಳಕೆಗೆ ಅನುಮತಿ ನೀಡಿದ 10 ದಿನಗಳ ಒಳಗೆ ಕೋವಿಡ್-19 ಲಸಿಕೆ ಬಿಡುಗಡೆ: ಕೇಂದ್ರ ಸರಕಾರ

Update: 2021-01-05 18:14 GMT

ಹೊಸದಿಲ್ಲಿ, ಜ. 5: ತುರ್ತು ಬಳಕೆಗೆ ಅನುಮತಿ ನೀಡಿದ 10 ದಿನಗಳ ಒಳಗೆ ಕೋವಿಡ್-19 ಲಸಿಕೆ ಬಿಡುಗಡೆಗೊಳಿಸಲು ಸರಕಾರ ಸಿದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ.

ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗೆ ಭಾರತದ ಔಷಧ ನಿಯಂತ್ರಕ ಅನುಮತಿ ನೀಡಿದ ಬಳಿಕ ಕೇಂದ್ರ ಆರೋಗ್ಯ ಸಚಿವಾಲಯ ಈ ಹೇಳಿಕೆ ನೀಡಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ‘ಕೋ ವಿನ್ ವಿತರಣೆ ನಿರ್ವಹಣೆ ಯೋಜನೆ’ಯ ಮಾಹಿತಿ ನೀಡಿದರು.

 ದೇಶದಲ್ಲಿ ಕರ್ನಾಲ್, ಮುಂಬೈ, ಚೆನ್ನೈ ಹಾಗೂ ಕೋಲ್ಕತಾದಲ್ಲಿ ಜಿಎಂಎಸ್‌ಡಿ ಎಂದು ಕರೆಯಲಾಗುವ 4 ಪ್ರಾಥಮಿಕ ಲಸಿಕೆ ಸಂಗ್ರಹಾಗಾರ ಹಾಗೂ 37 ಲಸಿಕೆ ಸಂಗ್ರಹಾಗಾರ ಇರಲಿದೆ. ಈ ಸಂಗ್ರಹಾಗಾರಗಳು ಲಸಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಲಿವೆ ಹಾಗೂ ವಿತರಣೆ ಮಾಡಲಿವೆ ಎಂದು ಅವರು ಹೇಳಿದರು. ಸಂಗ್ರಹ ಮಾಡಲಾದ ಲಸಿಕೆಗಳ ಸಂಖ್ಯೆ ಹಾಗೂ ಉಷ್ಣಾಂಶ ನಿಗಾವನ್ನು ಡಿಜಿಟಲ್ ಆಗಿ ನಿರ್ವಹಿಸಲಾಗುವುದು. ನಮ್ಮ ದೇಶದಲ್ಲಿ ಈ ಸೌಲಭ್ಯ ದಶಕಗಳ ಹಿಂದಿನಿಂದಲೂ ಇದೆ ಎಂದು ಅವರು ತಿಳಿಸಿದರು.

24X7 ಸ್ವಯಂಚಾಲಿತ ಅಧಿವೇಶನ ಹಂಚಿಕೆ, 12 ಭಾಷೆಗಳಲ್ಲಿ ಎಸ್‌ಎಂಎಸ್ ರವಾನೆ, ಸಹಾಯವಾಣಿ, ಸಂಯೋಜಿತ ದತ್ತಾಂಶ ಮರು ಪಡೆಯಲು ಡಿಜಿಟಲ್ ಲಾಕರ್, ಲಸಿಕೆಗಳ ಸಂಗ್ರಹಣೆ, ಕ್ಯುಆರ್ ಕೋಡ್ ಪ್ರಮಾಣ ಪತ್ರ ಮೊದಲಾದವು ‘ಕೋವಿನ್ ವಿತರಣೆ ವ್ಯವಸ್ಥೆ ಯೋಜನೆ’ಯ ಕೆಲವು ಪ್ರಮುಖ ಅಂಶಗಳು ಎಂದು ರಾಜೇಶ್ ಭೂಷಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News