×
Ad

​ದೇಶದಲ್ಲಿ ಮುಂದಿನ ವಾರವೇ ಕೋವಿಡ್ ಲಸಿಕೆ ನೀಡಿಕೆ ಆರಂಭ : ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್

Update: 2021-01-06 09:11 IST

ಹೊಸದಿಲ್ಲಿ: ದೇಶದಲ್ಲಿ ಮುಂದಿನ ವಾರವೇ ಕೋವಿಡ್-19 ಲಸಿಕೆ ನೀಡಿಕೆ ಆರಂಭಿಸಲಾಗುವುದು ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪ್ರಕಟಿಸಿದ್ದಾರೆ.

ದೇಶದ ಔಷಧ ನಿಯಂತ್ರಣ ಮಂಡಳಿ ತುರ್ತು ಬಳಕೆಗೆ ಅನುಮತಿ ನೀಡಿದ ಹತ್ತು ದಿನಗಳ ಒಳಗಾಗಿ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಕೋವಿಡ್-19 ಲಸಿಕೆಗಳಿಗೆ ಜ. 3ರಂದು ತರ್ತು ಬಳಕೆಗೆ ಅನುಮತಿ ನೀಡಲಾಗಿತ್ತು.

ಸಾಂಕ್ರಾಮಿಕದ ವಿರುದ್ಧದ ಲಸಿಕೆಗೆ ಇಡೀ ದೇಶ ಕಾಯುತ್ತಿದ್ದು, ಲಸಿಕೆ ನೀಡಿಕೆ ವೇಳಾಪಟ್ಟಿ ಬಗ್ಗೆ ಸರ್ಕಾರ ಅಧಿಕೃತವಾಗಿ ಘೋಷಿಸಿರುವುದು ಇದೇ ಮೊದಲು. ಆಕ್ಸ್‌ಫರ್ಡ್ ವಿವಿ ಮತ್ತು ಆಸ್ಟ್ರಾ ಝೆನೆಕಾ ತಯಾರಿಸಿದ ಕೋವಿಶೀಲ್ಡ್ ಲಸಿಕೆಗಾಗಿ ಪುಣೆ ಮೂಲದ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಅನುಮತಿ ನೀಡಿತ್ತು. ಅಂತೆಯೇ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆಗಳನ್ನು ನಿರ್ಬಂಧಿತವಾಗಿ ತುರ್ತು ಸಂದರ್ಭದಲ್ಲಿ ಬಳಸಲು ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಲಾಗಿತ್ತು.

ಪ್ರಮುಖ ಆರೋಗ್ಯ ಸೇವಾ ಮತ್ತು ಮುನ್ಪಡೆ ಕಾರ್ಯಕರ್ತರಿಗೆ ದೇಶಾದ್ಯಂತ ಆರಂಭಿಕ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. ಕೋವಿಡ್-19 ಲಸಿಕೆ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಸರ್ಕಾರ ಈಗಾಗಲೇ ಕೋ-ವಿನ್ ಎಂಬ ಐಟಿ ಪ್ಲಾಟ್‌ಫಾರಂ ಅಭಿವೃದ್ಧಿಪಡಿಸಿದ್ದು, ಮೊದಲ ಹಂತದಲ್ಲಿ ಲಸಿಕೆ ಪಡೆಯಲಿರುವವರ ದತ್ತಾಂಶಗಳನ್ನು ಈಗಾಗಲೇ ಅಪ್‌ಲೋಡ್ ಮಾಡಿದೆ.

ಕರ್ನಲ್, ಮುಂಬೈ, ಚೆನ್ನೈ ಮತ್ತು ಕೊಲ್ಕತ್ತ ಹೀಗೆ ನಾಲ್ಕು ಪ್ರಾಥಮಿಕ ಲಸಿಕೆ ಉಗ್ರಾಣಗಳಿಗೆ ಲಸಿಕೆಯನ್ನು ವಿಮಾನ ಮೂಲಕ ಒಯ್ಯಲಾಗುತ್ತದೆ. ಶೀತಲೀಕೃತ ವಾಹನಗಳಲ್ಲಿ ಇವುಗಳನ್ನು 37 ಸರ್ಕಾರಿ ಲಸಿಕೆ ಮಳಿಗೆಗಳಿಗೆ ಸಾಗಿಸಲಾಗುವುದು ಎಂದು ಭೂಷಣ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News