×
Ad

​ಹಕ್ಕಿಜ್ವರ ಭೀತಿ : ದೇಶಾದ್ಯಂತ ಕಟ್ಟೆಚ್ಚರ

Update: 2021-01-06 09:35 IST

ಹೊಸದಿಲ್ಲಿ : ದೇಶದ ವಿವಿಧ ರಾಜ್ಯಗಳಲ್ಲಿ ಹಕ್ಕಿಜ್ವರ (ಎಚ್5ಎನ್8 ವೈರಸ್ ಸೋಂಕು) ವ್ಯಾಪಕವಾಗಿ ಕಾಣಿಸಿಕೊಂಡಿರುವ ನಡುವೆಯೇ ದೇಶದ್ಯಂತ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಲ್ಲಿ ಕೋಳಿ ಹಾಗೂ ಬಾತುಕೋಳಿಗಳ ಸಾಮೂಹಿಕ ಮಾರಣಹೋಮ ಆರಂಭವಾಗಿದೆ.

ಕರ್ನಾಟಕ ಹಾಗೂ ತಮಿಳುನಾಡು ಕಣ್ಗಾವಲು ವ್ಯವಸ್ಥೆ ಬಲಗೊಳಿಸಿದ್ದು, ನೆರೆಯ ಕೇರಳದಲ್ಲಿ ವೈರಸ್ ಸೋಂಕು ವ್ಯಾಪಕವಾಗಿದ್ದು, 1700ಕ್ಕೂ ಹೆಚ್ಚು ಬಾತುಕೋಳಿಗಳು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿವೆ.

ಹರ್ಯಾಣದ ಪಂಚಕುಲ ಜಿಲ್ಲೆಯ ಫಾರಂ ಒಂದರಲ್ಲಿ ಕಳೆದ ಹತ್ತು ದಿನಗಳಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಕೋಳಿಗಳು ಸಾವಿಗೀಡಾಗಿದ್ದು, ಜಲಂಧರ್‌ನ ಪ್ರಾದೇಶಿಕ ರೋಗ ಪತ್ತೆ ಪ್ರಯೋಗಾಲಯದ ತಂಡ ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದೆ. ಆದರೆ ಹಕ್ಕಿ ಜ್ವರದ ಯಾವ ಪ್ರಕರಣಗಳೂ ಇದುವರೆಗೆ ದೃಢಪಟ್ಟಿಲ್ಲ ಎಂದು ಆರ್‌ಡಿಡಿಎಲ್ ಸ್ಪಷ್ಟಪಡಿಸಿದೆ.

ಮಧ್ಯಪ್ರದೇಶದ ಇಂಧೋರ್‌ನಲ್ಲಿ 155 ಕಾಗೆಗಳು ಎಚ್5ಎನ್8 ಸೋಂಕಿನಿಂದ ಮೃತಪಟ್ಟಿರುವುದನ್ನು ಸರ್ಕಾರ ದೃಢಪಡಿಸಿದೆ. ರಾಜಸ್ಥಾನದ ಜಲ್ವಾರ್ ಬಳಿಕ ಕೋಟಾ ಮತ್ತು ಬರಣ್ ಪ್ರದೇಶಗಳಲ್ಲೂ ಸೋಂಕು ಕಾಣಿಸಿಕೊಂಡಿದೆ. ಆದರೆ ಮಧ್ಯಪ್ರದೇಶ ಜತೆ ಗಡಿ ಹಂಚಿಕೊಂಡಿರುವ ಮಹಾರಾಷ್ಟ್ರದಲ್ಲಿ ಇದುವರೆಗೆ ಯಾವ ಪ್ರಕರಣಗಳೂ ಬೆಳಕಿಗೆ ಬಂದಿಲ್ಲ.

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಪಾಂಗ್‌ಡ್ಯಾಂ ಸರೋವರ ಪಕ್ಷಿಧಾಮದಲ್ಲಿ 2700ಕ್ಕೂ ಹೆಚ್ಚು ವಲಸೆ ಹಕ್ಕಿಗಳು ಮೃತಪಟ್ಟ ಬಳಿಕ ಅಧಿಕಾರಿಗಳು ಸಮೀಕ್ಷೆ ನಡೆಸಿ, ಕುಕ್ಕುಟೋದ್ಯಮಕ್ಕೆ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳು ಕೈಗೊಂಡಿದ್ದಾರೆ.

ಕೇರಳದ ಕೊಟ್ಟಾಯಂ ಮತ್ತು ಅಳಪ್ಪುರ ಪ್ರದೇಶಗಳಲ್ಲಿ ಸೋಂಕು ಪೀಡಿತ ಪ್ರದೇಶಗಳ ಒಂದು ಕಿಲೋಮೀಟರ್ ಸರಹದ್ದಿನಲ್ಲಿ ಹಕ್ಕಿಗಳನ್ನು ಸಂಹರಿಸುವ ಕಾರ್ಯ ಆರಂಭಿಸಲಾಗಿದೆ. ಕ್ಷಿಪ್ರ ಸ್ಪಂದನೆ ತಂಡಗಳನ್ನು ರಚಿಸಿ ಕೋಳಿ ಹಾಗೂ ಬಾತುಕೋಳಿಗಳನ್ನು ಸಂಹಾರ ಮಾಡಲಾಗುತ್ತಿದೆ.

ತೀವ್ರವಾಗಿ ಬಾಧಿತವಾಗಿರುವ ಕರುವಟ್ಟಾ ಪಂಚಾಯತ್ ನಲ್ಲಿ 12 ಸಾವಿರ, ನೀಂದೂರ್ ಪಂಚಾಯ್ತಿಯಲ್ಲಿ 3000 ಕೋಳಿಗಳನ್ನು ಸಾಯಿಸಲಾಗಿದೆ. ನೀಂದೂರಿನಲ್ಲಿ 1700 ಬಾತುಕೋಳಿಗಳು ಈ ವೈರಸ್ ಸೋಂಕಿನಿಂದ ಮೃತಪಟ್ಟಿದ್ದವು. ಕುಟ್ಟಂಡ್ ಪ್ರದೇಶದಲ್ಲಿ 34 ಸಾವಿರ ಸೇರಿದಂತೆ ಒಟ್ಟು 40 ಸಾವಿರ ಸಾಕು ಪಕ್ಷಿಗಳನ್ನು ಸಂಹರಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News