×
Ad

ಉತ್ತರ ಪ್ರದೇಶ: ದೇವಸ್ಥಾನಕ್ಕೆ ತೆರಳಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಹತ್ಯೆ

Update: 2021-01-06 11:53 IST

ಲಕ್ನೊ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 2012ರ ದಿಲ್ಲಿಯ ನಿರ್ಭಯಾ ಪ್ರಕರಣವನ್ನು ನೆನಪಿಸುವ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವು ಉತ್ತರಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. 50ರ ವಯಸ್ಸಿನ ಮಹಿಳೆಯನ್ನು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಭೀಕರವಾಗಿ ಹತ್ಯೆಗೈದಿದ್ದಾರೆ ಎಂದು News 18 ವರದಿ ಮಾಡಿದೆ.

ಬದೌನ್ ಜಿಲ್ಲೆಯ ಉಘೈಟಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ರವಿವಾರ ಸಂಜೆ ದೇವಸ್ಥಾನಕ್ಕೆ ಪೂಜೆಗೆಂದು ಹೋದವರು ಮತ್ತೆ ವಾಪಸಾಗಲಿಲ್ಲ. ಬಳಿಕ ಅವರು ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದರು.

ಘಟನೆಗೆ ಸಂಬಂಧಿಸಿ ಅರ್ಚಕ ಸೇರಿ ಮೂವರ ವಿರುದ್ದ ಎಫ್ ಐಆರ್ ದಾಖಲಿಸಲಾಗಿದ್ದು, ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯಲೋಪಕ್ಕಾಗಿ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ,

ರಾತ್ರಿ 12 ಗಂಟೆ ಸುಮಾರಿಗೆ ಮಹಂತಾ ಬಾಬಾ ಸತ್ಯನಾರಾಯಣ, ಆತನ ಸಹಚರರಾದ ವೆದ್ರಮ್ ಹಾಗೂ ಚಾಲಕ ಜಸ್ಪಾಲ್ ರಕ್ತದ ಮಡುವಿನಲ್ಲಿದ್ದ ತನ್ನ ತಾಯಿಯನ್ನು ತಮ್ಮದೇ ವಾಹನದಲ್ಲಿ ಕರೆ ಬಂದು ಮನೆ ಬಳಿ ಬಿಟ್ಟು ಪರಾರಿಯಾಗಿದ್ದರು. ತಾಯಿ ಪ್ರತಿದಿನದ ಪೂಜೆಗಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ರವಿವಾರ ಸಂಜೆ 5ಕ್ಕೆ ದೇವಾಲಯಕ್ಕೆ ಹೋದ ತಾಯಿಯನ್ನು ರಾತ್ರಿ 12ರ ಸುಮಾರಿಗೆ ಮೂವರು ವಾಹನದಲ್ಲಿ ತಂದುಬಿಟ್ಟಿದ್ದಾರೆ ಎಂದು ಮೃತ ಮಹಿಳೆಯ ಪುತ್ರ ಹೇಳಿದ್ದಾರೆ.

ನಾವು ದೂರು ನೀಡಿದರೂ ಉಘೈಟಿ ಪೊಲೀಸ್ ಠಾಣೆಯ ಅಧಿಕಾರಿ ರವೀಂದ್ರ ಪ್ರತಾಪ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸಂತ್ರಸ್ತೆಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.ಘಟನೆ ನಡೆದು 18 ಗಂಟೆಗಳ ಬಳಿಕ  ಸೋಮವಾರ ಮಧ್ಯಾಹ್ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಮೂವರು ವೈದ್ಯರ ತಂಡ ಪೋಸ್ಟ್ ಮಾರ್ಟಂ ಮಾಡಿದೆ.

ಪೋಸ್ಟ್ ಮಾರ್ಟಂ ವರದಿಯ ಪ್ರಕಾರ, ಮಹಿಳೆಯ ಖಾಸಗಿ ಭಾಗಕ್ಕೆ ರಾಡ್ ತುರುಕಿಸಲಾಗಿದ್ದು, ತೀವ್ರ ಗಾಯವಾಗಿದೆ. ದುಷ್ಕರ್ಮಿಗಳ ನಡೆಸಿರುವ ಹಲ್ಲೆಗೆ ಮಹಿಳೆಯ ಶ್ವಾಸಕೋಶಕ್ಕೆ ಹಾನಿಯಾಗಿದ್ದು,ಮಹಿಳೆಯ ಪಕ್ಕೆಲುಬು ಹಾಗೂ ಕಾಲು ಮುರಿಯಲಾಗಿದೆ. ಆಕೆಗೆ ತೀವ್ರ ರಕ್ತಸ್ರಾವವೂ ಆಗಿದೆ ಎಂದು ವರದಿಯಾಗಿದೆ.

 ಪೊಲೀಸರು ಹತ್ಯೆ ಹಾಗೂ ಗ್ಯಾಂಗ್ ರೇಪ್ ಪ್ರಕರಣ ದಾಖಲಿಸಿದ್ದು, ತಲೆಮರೆಸಿಕೊಂಡಿರುವ ಇಬ್ಬರು ದುಷ್ಕರ್ಮಿಗಳನ್ನುಸೆರೆ ಹಿಡಿಯಲು 4 ತಂಡಗಳನ್ನು ರಚಿಸಿದ್ದಾರೆ.

ಈ ಘಟನೆಯು 2012ರಲ್ಲಿ ದಿಲ್ಲಿಯಲ್ಲಿ ನಡೆದಿದ್ದ ನಿರ್ಭಯಾ ಘಟನೆಯನ್ನು ನೆನಪಿಸುತ್ತಿದೆ. ಹೊಸದಿಲ್ಲಿಯಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಬಳಿಕ ವಿದ್ಯಾರ್ಥಿ‍ನಿ ತೀವ್ರ ಸ್ವರೂಪದ ಗಾಯದಿಂದಾಗಿ ಸಿಂಗಾಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News