ʼಶೂʼನಲ್ಲಿ ಠಾಕೂರ್‌ ಪದ ಬಳಕೆ: ಮುಸ್ಲಿಂ ಬೀದಿ ವ್ಯಾಪಾರಿಯ ವಿರುದ್ಧ ಬಜರಂಗದಳದಿಂದ ಕೇಸು ದಾಖಲು

Update: 2021-01-06 08:15 GMT
photo: twitter

ಲಕ್ನೋ,ಜ.06: ಹಿಂಭಾಗದಲ್ಲಿ 'ಠಾಕೂರ್' ಎಂದು ಬರೆಯಲಾಗಿರುವ ಶೂ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶದ ಬುಲಂದ್ ಶಹರ್‍ನ ಮುಸ್ಲಿಂ ವರ್ತಕನೊಬ್ಬನ  ವಿರುದ್ಧ ಎಫ್‍ಐಆರ್ ದಾಖಲಿಸಿ ಆತನನ್ನು ಬಂಧಿಸಲಾಗಿದೆ. ವಿಶಾಲ್ ಚೌಹಾಣ್ ಎಂಬ ಸ್ಥಳೀಯ ಬಜರಂಗದಳ ನಾಯಕ ನೀಡಿದ ದೂರಿನ ಆಧಾರದಲ್ಲಿ ಅಂಗಡಿ ಮಾಲಿಕ ನಾಸಿರ್ ನ ಬಂಧನವಾಗಿದೆ. ವಿವಿಧ ಧರ್ಮಗಳ ನಡುವೆ ದ್ವೇಷದ ಭಾವನೆ  ಉಂಟು ಮಾಡಿದ್ದಕ್ಕೆ ಹಾಗೂ ಇನ್ನೊಬ್ಬರ ಭಾವನೆಗಳಿಗೆ ನೋವುಂಟು ಮಾಡಿದ ಸಹಿತ ಗಂಭೀರ ಆರೋಗಳನ್ನು  ನಾಸಿರ್ ವಿರುದ್ಧ ಹೊರಿಸಲಾಗಿದೆಯಲ್ಲದೆ ದೂರಿನಲ್ಲಿ ಶೂ ತಯಾರಿಕಾ ಕಂಪೆನಿಯನ್ನೂ ಉಲ್ಲೇಖಿಸಲಾಗಿದೆ ಎಂದು thequint.com ವರದಿ ಮಾಡಿದೆ.

ಠಾಕೂರ್ ಮೇಲ್ಜಾತಿಯ ಸಮುದಾಯವಾಗಿರುವುದರಿಂದ ಶೂ ಹಿಂಭಾಗ ಠಾಕೂರ್ ಎಂದು ಬರೆದಿರುವುದು ಅವರಿಗೆ ಅವಮಾನಿಸಿದಂತೆ ಎಂಬ ಆಧಾರದಲ್ಲಿ ಈ ದೂರು ದಾಖಲಾಗಿದೆ.

ದೂರುದಾರ ಸೋಮವಾರ ನಾಸಿರ್ ನ ರಸ್ತೆ ಬದಿ ಅಂಗಡಿಗೆ  ಹೋದಾಗ  ಬೂಟಿನ ಹಿಂಭಾಗದಲ್ಲಿ ಠಾಕೂರ್  ಬರೆದಿರುವುದನ್ನು ನೋಡಿದ ನಂತರ ಅದಕ್ಕೆ ಆಕ್ಷೇಪ ಸೂಚಿಸಿದಾಗ ಅಂಗಡಿಯಾತ ಆತನನ್ನು ನಿಂದಿಸಿ ಹಲ್ಲೆಗೈದಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಘಟನೆಯ 58 ಸೆಕೆಂಡ್ ಅವಧಿಯ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅದರಲ್ಲಿ ನಾಸಿರ್ ಸುತ್ತ ಹಲವರು ನಿಂತಿರುವುದು ಹಾಗೂ ಆತ  "ನಾನು ಈ ಶೂ ತಯಾರಿಸಿದ್ದೇನೆಯೇ?" ಎಂದು ಪ್ರಶ್ನಿಸಿದಾಗ ಸುತ್ತ ನೆರೆದವರು "ಹಾಗಾದರೆ ಇದನ್ನು ಇಲ್ಲಿಗೇಕೆ ತಂದಿದ್ದೀಯಾ?" ಎಂದು ಹೇಳುತ್ತಿರುವುದು ಕೇಳಿಸುತ್ತದೆ. ಆದರೆ ಯಾರೂ ಯಾರನ್ನೂ ನಿಂದಿಸಿರುವುದು ಅಥವಾ ಹಲ್ಲೆಗೈದಿರುವುದು ವೀಡಿಯೋದಲ್ಲಿ ಕಾಣಿಸುವುದಿಲ್ಲ.

ಸದ್ಯ ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ವಿವಿಧ ಧರ್ಮಗಳ ನಡುವೆ ದ್ವೇಷದ ಭಾವನೆ  ಉಂಟು ಮಾಡಿದ್ದಾನೆ ಎಂದು ದಾಖಲಿಸಿದ ಪ್ರಕರಣವು ಸುಳ್ಳೆಂದು ಸಾಬೀತಾಗಿದೆ. ಉಳಿದ ಪ್ರಕರಣಗಳ ಕುರಿತು ನಾವು ತನಿಖೆ ಮುಂದುವರಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News