ಪಿಎನ್‌ಬಿ ಹಗರಣ:ನೀರವ್ ಮೋದಿ ವಿರುದ್ಧ ಸಾಕ್ಷ್ಯ ನುಡಿಯಲಿರುವ ಸೋದರಿ ಮತ್ತು ಆಕೆಯ ಪತಿ

Update: 2021-01-06 15:13 GMT

ಮುಂಬೈ,ಜ.6: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈ.ಡಿ.)ವು ದಾಖಲಿಸಿರುವ ಎರಡು ಪ್ರಕರಣಗಳಲ್ಲಿ ದೇಶಭ್ರಷ್ಟ ವಜ್ರಾಭರಣಗಳ ವ್ಯಾಪಾರಿ ನೀರವ್ ಮೋದಿ ವಿರುದ್ಧ ಸಾಕ್ಷಿಗಳಾಗಲು ಆತನ ಸೋದರಿ ಪೂರ್ವಿ ಮೆಹ್ತಾ ಮತ್ತು ಅವರ ಪತಿ ಮಯಾಂಕ್ ಮೆಹ್ತಾ ಅವರಿಗೆ ಇಲ್ಲಿಯ ವಿಶೇಷ ನ್ಯಾಯಾಲಯವು ಅನುಮತಿ ನೀಡಿದೆ.

ಬೆಲ್ಜಿಯಂ ಪ್ರಜೆಯಾಗಿರುವ ಪೂರ್ವಿ ಮತ್ತು ಬ್ರಿಟಿಷ್ ಪ್ರಜೆಯಾಗಿರುವ ಮಯಾಂಕ್ ಕಳೆದ ತಿಂಗಳು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಗಳಲ್ಲಿ,ಮೋದಿಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಗಳನ್ನು ಹಾಗೂ ಆತನ ಬ್ಯಾಂಕ್ ಖಾತೆಗಳು, ಆಸ್ತಿಗಳು ಮತ್ತು ಕಂಪನಿಗಳ ಬಗ್ಗೆ ಮಾಹಿತಿಗಳನ್ನು ಒದಗಿಸುವುದಾಗಿ ತಿಳಿಸಿದ್ದರು. ತಾನು ಪ್ರಕರಣದಲ್ಲಿ ಪ್ರಮುಖ ಆರೋಪಿಯಲ್ಲ ಮತ್ತು ತನ್ನ ಪಾತ್ರವು ಸೀಮಿತವಾಗಿದೆ ಎಂದು ತನಿಖಾ ಸಂಸ್ಥೆಯು ಹೇಳಿದೆ ಎಂದು ಪೂರ್ವಿ ತನ್ನ ಕ್ಷಮಾಯಾಚನಾ ಅರ್ಜಿಯಲ್ಲಿ ಹೇಳಿದ್ದರು.

ಮೋದಿಯ ಕ್ರಿಮಿನಲ್ ಚಟುವಟಿಕೆಗಳಿಂದಾಗಿ ತನ್ನ ಕಕ್ಷಿದಾರರ ವೃತ್ತಿಪರ ಮತ್ತು ಖಾಸಗಿ ಬದುಕುಗಳು ಸ್ಥಗಿತಗೊಂಡಿವೆ ಮತ್ತು ಅವರು ಮೋದಿಯಿಂದ ದೂರವಾಗಿದ್ದಾರೆ ಎಂದು ಮೆಹ್ತಾ ದಂಪತಿ ಪರ ವಕೀಲ ಅಮಿತ್ ದೇಸಾಯಿ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಮಾಫಿ ಸಾಕ್ಷಿಗಳಾಗಲು ದಂಪತಿಗೆ ಅನುಮತಿ ನೀಡಿದ ವಿಶೇಷ ನ್ಯಾಯಾಧೀಶ ವಿ.ಸಿ.ಬರ್ಡೆ,ನ್ಯಾಯಾಲಯಕ್ಕೆ ಹಾಜರಾಗುವಂತೆ ಅವರಿಗೆ ನಿರ್ದೇಶ ನೀಡಿದರು. ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಂತರ್ ರಾಷ್ಟ್ರೀಯ ಪ್ರಯಾಣದ ಮೇಲಿನ ನಿರ್ಬಂಧಗಳಿಂದಾಗಿ ತಮಗೆ ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ, ಆದರೆ ನ್ಯಾಯಾಧೀಶರ ಎದುರು ಸೇರಿದಂತೆ ವೀಡಿಯೊ ಕಾನ್ಫರೆನ್ಸ್ ಮೂಲಕ ತಮ್ಮ ಹೇಳಿಕೆಗಳನ್ನು ದಾಖಲಿಸಲು ಸಿದ್ಧವಿರುವುದಾಗಿ ಮೆಹ್ತಾ ದಂಪತಿ ತಮ್ಮ ಅರ್ಜಿಗಳಲ್ಲಿ ತಿಳಿಸಿದ್ದರು.

ಪಿಎನ್‌ಬಿ ವಂಚನೆಗೆ ಸಂಬಂಧಿಸಿದಂತೆ ಮೋದಿ ವಿರುದ್ಧ ಸಿಬಿಐ ಮತ್ತು ಈ.ಡಿ.ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿವೆ.

ಸಿಬಿಐ ಪ್ರಕರಣದಲ್ಲಿ ಪೂರ್ವಿ ಮೆಹ್ತಾರನ್ನು ಹೆಸರಿಸಲಾಗಿಲ್ಲ. ಆದರೆ ಈ.ಡಿ.ಪ್ರಕರಣದಲ್ಲಿ ಮೋದಿ,  ಪೂರ್ವಿ ಮೂಲಕ 175.1 ಮಿಲಿಯನ್ ಡಾಲರ್ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಎಂದು ಆರೋಪಿಸಲಾಗಿದೆ. ಮಯಾಂಕರನ್ನು ದೋಷಾರೋಪ ಪಟ್ಟಿಯಲ್ಲಿ ಸಹ ಆರೋಪಿಯನ್ನಾಗಿ ಹೆಸರಿಸಲಾಗಿದೆ.

ಬ್ರಿಟಿಷ್ ಪೊಲೀಸರು 2019,ಮಾ.19ರಂದು ಮೋದಿಯನ್ನು ಬಂಧಿಸಿದ್ದು,ಆತ ಸದ್ಯ ಲಂಡನ್‌ನ ವಾಂಡ್ಸ್‌ವರ್ಥ್ ಜೈಲಿನಲ್ಲಿದ್ದಾನೆ. ಆತನ ಗಡಿಪಾರು ಕೋರಿ ಸಿಬಿಐ ಮತ್ತು ಈ.ಡಿ.ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳು ವಿಚಾರಣೆಗೆ ಬಾಕಿಯಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News