ಬ್ರಿಟನ್ ಪ್ರಧಾನಿ ಭೇಟಿ ರದ್ದು ನಮ್ಮ ಜಯ, ಮೋದಿ ಸರ್ಕಾರದ ಸೋಲು : ಸಂಯುಕ್ತ ಕಿಸಾನ್ ಮೋರ್ಚಾ

Update: 2021-01-07 05:15 GMT

ಹೊಸದಿಲ್ಲಿ : "ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಈ ತಿಂಗಳ ಕೊನೆಗೆ ಭಾರತಕ್ಕೆ ನೀಡಲು ಉದ್ದೇಶಿಸಿದ್ದ ಭೇಟಿಯನ್ನು ರದ್ದುಪಡಿಸಿರು ವುದು ನಮಗೆ ಸಿಕ್ಕಿದ ರಾಜಕೀಯ ಜಯ ಹಾಗೂ ಮೋದಿ ಸರ್ಕಾರದ ರಾಜತಾಂತ್ರಿಕ ಸೋಲು ಎಂದು ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಹೇಳಿಕೆ ನೀಡಿವೆ. ರೈತ ಪ್ರತಿಭಟನೆಗೆ ಜಾಗತಿಕ ಬೆಂಬಲ ಸಿಗುತ್ತಿದೆ ಎಂದು ಬಣ್ಣಿಸಿವೆ.

ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಬೋರಿಸ್ ಜಾನ್ಸನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಬ್ರಿಟನ್‌ನಲ್ಲಿ ರೂಪಾಂತರಿತ ಕೊರೋನ ವೈರಸ್‌ನಿಂದ ಉದ್ಭವಿಸಿರುವ ಆರೋಗ್ಯ ತುರ್ತು ಸ್ಥಿತಿಯ ಕಾರಣ ನೀಡಿ ಜಾನ್ಸನ್ ಭೇಟಿ ರದ್ದುಪಡಿಸಿದ್ದರು.

"ಬೋರಿಸ್ ಜಾನ್ಸನ್ ಅವರ ಭಾರತ ಭೇಟಿ ರದ್ದಾಗಿರುವುದು ರೈತರ ರಾಜಕೀಯ ವಿಜಯ ಹಾಗೂ ಮೋದಿ ಸರ್ಕಾರದ ರಾಜತಾಂತ್ರಿಕ ಸೋಲು. ವಿಶ್ವದ ಎಲ್ಲೆಡೆಯ ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳು ನಮ್ಮ ಚಳವಳಿಯನ್ನು ಬೆಂಬಲಿಸುತ್ತಿವೆ" ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆ ನೀಡಿದೆ.

ಜನವರಿ 26ರಂದು ಟ್ರ್ಯಾಕ್ಟರ್ ಹೋರಾಟ ಜಾಥಾ ನಡೆಸುವುದಾಗಿ ರೈತರು ಘೋಷಿಸಿ ಜನವರಿ 7ರಂದು ಇದರ ರಿಹರ್ಸಲ್ ನಡೆಯಲಿದೆ ಎಂದು ಪ್ರಕಟಿಸಿದ್ದರು. ಈ ಎಲ್ಲ ಪ್ರಯತ್ನಗಳ ಫಲವಾಗಿ ಬ್ರಿಟನ್ ಪ್ರಧಾನಿ ಭೇಟಿ ರದ್ದಾಗಿರುವುದು ರೈತರಿಗೆ ದೊಡ್ಡ ಗೆಲುವು ಎಂದು ಬಣ್ಣಿಸಿದೆ.
ಈ ಮಧ್ಯೆ ರೈತರ ಪ್ರತಿಭಟನೆ ಆರಂಭವಾದ ಬಳಿಕ ಇದುವರೆಗೆ 80ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ ಎಂದು ರೈತರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News