`ಮತಾಂತರ' ಯತ್ನ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ 18ರ ಯುವಕ ಇನ್ನೂ ಜೈಲಿನಲ್ಲಿ

Update: 2021-01-07 07:07 GMT

ಲಕ್ನೋ,ಜ.07: ಕಳೆದ ತಿಂಗಳು ಸ್ನೇಹಿತನೊಬ್ಬನ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿ ತನ್ನ 16 ವರ್ಷದ ಹಿಂದೂ ಗೆಳತಿಯೊಂದಿಗೆ ಮನೆಯತ್ತ ನಡೆಯುತ್ತಿದ್ದ ಹದಿಹರೆಯದ ಮುಸ್ಲಿಂ ಯುವಕನನ್ನು ಉತ್ತರ ಪ್ರದೇಶದ ಪೊಲೀಸರು ರಾಜ್ಯದ ಹೊಸ ಬಲವಂತದ ಮತಾಂತರ ತಡೆ ಕಾಯಿದೆಯನ್ವಯ ಬಂಧಿಸಿದ ನಂತರ ಆತ ಕಳೆದ 20ಕ್ಕೂ ಅಧಿಕ ದಿನಗಳಿಂದ ಜೈಲಿನಲ್ಲಿಯೇ ಇದ್ದಾನೆ ಎಂದು ndtv.com ವರದಿ ಮಾಡಿದೆ.

ಆತನ ಗ್ರಾಮ ಬಿಜ್ನೋರ್‍ನಲ್ಲಿ ಆತನ ತಾಯಿ ಸಂಜೀದಾ ಮಗ ಶಕೀಬ್  ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಆತನ ಜಾಮೀನು ಅರ್ಜಿ ಶುಕ್ರವಾರ ವಿಚಾರಣೆಗೆ ಬರಲಿದೆ.  ವಿಧವೆಯಾಗಿರುವ ಸಂಜೀದಾಗೆ ಯಾವುದೇ ಆದಾಯವಿಲ್ಲವಾಗಿದ್ದು ಕಷ್ಟ ಪಟ್ಟು ಹಣ ಹೊಂದಿಸಿ ಮಗನ ಬಿಡುಗಡೆಗಾಗಿ ವಕೀಲರನ್ನು ನೇಮಿಸಿದ್ದಾರೆ.

ಪತಿಯ ಚಿಕಿತ್ಸೆಗಾಗಿ ಪಡೆದಿದ್ದ ಲಕ್ಷಗಟ್ಟಲೆ ಸಾಲವೇ ತೀರಿಸಿಲ್ಲದೇ ಇರುವುದರಿಂದ ಯಾರೂ ಸಾಲ ನೀಡಲು ಮುಂದೆ ಬರುತ್ತಿಲ್ಲ ಎಂದು ಆಕೆ ಹೇಳುತ್ತಾರೆ.

ಡಿಸೆಂಬರ್ 15ರಂದು ಶಕೀಬ್ ಬಂಧನವಾಗಿದ್ದು ಆತ ಹಿಂದೂ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಬಲವಂತದಿಂದ ಮತಾಂತರಗೊಳಿಸಲು ಯತ್ನಿಸಿದ್ದಾನೆಂದು ಆರೋಪಿಸಲಾಗಿದೆ. ಆದರೆ ಈ ಆರೋಪವನ್ನು ಆ ಹುಡುಗಿ ಮತ್ತಾಕೆಯ ತಾಯಿ ನಿರಾಕರಿಸಿದ್ದಾರೆ ಎಂದು ವರದಿ ತಿಳಿಸಿದೆ.

ಆದರೆ ಪೊಲೀಸರು ಮಾತ್ರ ತಾವು ಹುಡುಗಿಯ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದಾಗಿ ಹೇಳುತ್ತಾರೆ. ಐಪಿಸಿ, ಪೋಕ್ಸೋ ಕಾಯಿದೆ, ಪರಿಶಿಷ್ಟ ಜಾತಿ, ಪಂಗಡ ಕಾಯಿದೆ ಹಾಗೂ ಮತಾಂತರ ತಡೆ ಕಾಯಿದೆಯನ್ವಯ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ಹೇಳುತ್ತಾರೆ.

ಆದರೆ ಹುಡುಗಿಯ ತಂದೆ ಮಾತ್ರ ಇದು ಬಲವಂತದ ಮತಾಂತರ ಯತ್ನ ಎಂದೇ ವಾದಿಸುತ್ತಿದ್ದಾರೆ. ಆದರೆ ಅಪ್ರಾಪ್ತೆ ಮತ್ತಾಕೆಯ ತಾಯಿ ಎಲ್ಲಿದ್ದಾರೆಂದು ಆಕೆಯ ಗ್ರಾಮದ ಜನರಿಗೂ ತಿಳಿದಿಲ್ಲ. ಆದರೆ ಹುಡುಗಿ ವಾಸಿಸುವ ಗ್ರಾಮದ ಪ್ರಧಾನ ವಿನೋದ್ ಸೈನಿ ಮಾತ್ರ ಇದು ಪೊಲೀಸರೇ ಹೆಣೆದ ಕಥೆ ಎಂದು ಬಲವಾಗಿ ನಂಬಿದ್ದಾರೆ. ಇದು ಲವ್ ಜಿಹಾದ್ ಪ್ರಕರಣವಾಗಿರಲು ಸಾಧ್ಯವಿಲ್ಲ, ಇಬ್ಬರೂ ವಿದ್ಯಾರ್ಥಿಗಳು ಹಾಗೂ ಪರಸ್ಪರ ಸಂಪರ್ಕದಲ್ಲಿದ್ದರು ಎಂದು ಅವರು ಹೇಳುತ್ತಾರೆ.

ಆದರೆ ಹುಡುಗಿಯ ವೈದ್ಯಕೀಯ ತಪಾಸಣೆ ಹಾಗೂ ಇತರರ ಹೇಳಿಕೆಗಳ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ ಆದರೆ ಕೆಲವರು  ಕುಟುಂಬಕ್ಕೆ ತನ್ನ ಹೇಳಿಕೆ ಬದಲಾಯಿಸಲು ಒತ್ತಡ ಹೇರುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News