ಪ್ರತಿಭಟನಾನಿರತ ರೈತರಿಗೆ ಕೋವಿಡ್‌ ನಿಂದ ರಕ್ಷಣೆ ಒದಗಿಸಲಾಗಿದೆಯೇ?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

Update: 2021-01-07 18:39 GMT

ಹೊಸದಿಲ್ಲಿ, ಜ. 7: ದಿಲ್ಲಿಯ ಸುತ್ತಮುತ್ತ ಕಳೆದ ಕೆಲವು ವಾರಗಳಿಂದ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರಿಗೆ ಕೊರೋನದಿಂದ ರಕ್ಷಣೆ ನೀಡಲಾಗಿದೆಯೇ ಎಂದು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.

ಕೊರೋನ ಸೋಂಕು ಏರಿಕೆಯಾಗಲು ಕಾರಣವಾಗಿದೆ ಎಂದು ಆರೋಪಿಸಲಾದ ತಬ್ಲೀಘಿ ಜಮಾಅತ್‌ನ ದಿಲ್ಲಿಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಮಾರ್ಚ್‌ನಲ್ಲಿ ನಡೆದ ಸಮಾವೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ಉಲ್ಲೇಖಿಸಿದೆ. ರೈತರ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ಇಂತಹದೇ ಪರಿಸ್ಥಿತಿಯನ್ನು ತಡೆಯಲು ಯಾವ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಿದ್ದೀರಿ ಎಂದು ಅದು ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ. ಅಲ್ಲದೆ, ಎರಡು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಕೇಂದ್ರ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ.

‘‘ರೈತರ ಪ್ರತಿಭಟನೆ ಸಂದರ್ಭ ಇದೇ ರೀತಿಯ ಸಮಸ್ಯೆ ಉದ್ಭವಿಸಲಿದೆ. ರೈತರನ್ನು ಕೊರೋನದಿಂದ ರಕ್ಷಿಸಲಾಗುತ್ತಿದೆಯೇ ಎಂದು ನಮಗೆ ತಿಳಿದಿಲ್ಲ. ಸೋಂಕು ಹರಡುವುದನ್ನು ತಡೆಯಲು ನೀವು ಯಾವ ಮಾರ್ಗಸೂಚಿಗಳನ್ನು ನೀಡಿದ್ದೀರಿ’’ ಎಂದು ಮೂವರು ಸದಸ್ಯರ ಪೀಠ ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಲ್ಲಿ ಪ್ರಶ್ನಿಸಿತು.

ಈ ಹಿಂದಿನ ಅನುಭವ (ತಬ್ಲೀಘಿ ಸಮಾವೇಶವನ್ನು ಉಲ್ಲೇಖಿಸಿ)ದಿಂದ ನೀವು ಪಾಠ ಕಲಿತಿದ್ದೀರಾ? ಅದು ಹೇಗೆ ಸಂಭವಿಸಿತು ಎಂದು ನೀವು ತಿಳಿದುಕೊಂಡಿದ್ದೀರಾ ? ರೈತರ ಪ್ರತಿಭಟನೆಯಲ್ಲಿ ಕೂಡ ಇದೇ ರೀತಿಯ ಸಮಸ್ಯೆಗಳು ಹುಟ್ಟಿಕೊಳ್ಳಲಿವೆ ಎಂದು ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ ಬೋಬ್ಡೆ ನೇತೃತ್ವದ ನ್ಯಾಯಪೀಠ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿತು.

ತುಷಾರ್ ಮೆಹ್ತಾ ಅವರು, ಜಮಾಅತ್ ಸಮಾವೇಶದ ಕುರಿತು ತನಿಖೆ ಮುಂದುವರಿದಿದೆ ಎಂದು ಹೇಳಿದರು. ದೊಡ್ಡ ಸಂಖ್ಯೆಯಲ್ಲಿ ಜನ ಸೇರಿರುವುದಕ್ಕೆ ಸಂಬಂಧಿಸಿ ಮಾರ್ಗಸೂಚಿಗಳು ಜಾರಿಯಲ್ಲಿವೆ ಎಂದರು ಹಾಗೂ ಪ್ರತಿಕ್ರಿಯೆ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ಕೋರಿದರು.

ತಬ್ಲೀಘ್ ಜಮಾಅತ್ ಸಮಾವೇಶದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಜಮ್ಮು ಹಾಗೂ ಕಾಶ್ಮೀರ ಮೂಲದ ವಕೀಲ ಸುಪ್ರಿಯಾ ಪಂಡಿತಾ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ.

ಸಾಂಕ್ರಾಮಿಕ ರೋಗದ ಸಂದರ್ಭ ಸಾರ್ವಜನಿಕ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಇಂತಹ ಘಟನೆಗಳನ್ನು ತಡೆಯಲು ಮಾರ್ಗಸೂಚಿಗಳ ಅಗತ್ಯತೆ ಇದೆ ಎಂದು ದೂರಿನಲ್ಲಿ ಒತ್ತಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News