ಅಮೆರಿಕಾ ಸಂಸತ್‌ ಮೇಲಿನ ದಾಳಿಕೋರರ ಕೈಯಲ್ಲಿ ಭಾರತದ ಧ್ವಜವೇಕೆ?: ಬಿಜೆಪಿ ಸಂಸದ ವರುಣ್‌ ಗಾಂಧಿ ಪ್ರಶ್ನೆ

Update: 2021-01-07 15:36 GMT
photo/twitter

ಹೊಸದಿಲ್ಲಿ,ಜ.7: ಅಮೆರಿಕಾದ ವಾಷಿಂಗ್ಟನ್‌ ಡಿಸಿಯಲ್ಲಿರುವ ಅಮೆರಿಕಾ ಸಂಸತ್‌ ಭವನದ ಮೇಲೆ ನಿರ್ಗಮನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆಂಬಲಿಗರು ದಾಳಿ ನಡೆಸಿದ್ದು, ದಾಳಿಯಲ್ಲಿ ಇದುವರೆಗೆ 4 ಮಂದಿ ಮೃತಪಟ್ಟಿರುವ ಕುರಿತು ವರದಿಯಾಗಿದೆ. ಟ್ರಂಪ್‌ ಬೆಂಬಲಿಗರು ಅಮೆರಿಕಾದ ಧ್ವಜ ಮತ್ತು ಪ್ಲೇಕಾರ್ಡ್‌ ಗಳನ್ನು ಹಿಡಿದುಕೊಂಡು ದಾಳಿಯಲ್ಲಿ ನಿರತರಾಗಿದ್ದು, ಈ ನಡುವೆ ಭಾರತ ಮತ್ತು ಇಸ್ರೇಲ್‌ ನ ಧ್ವಜವೂ ಕಾಣಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಈ ಕುರಿತಾದಂತೆ ಅಮೆರಿಕಾದ ಪತ್ರಕರ್ತ ಅಲೆಜಾಂಡ್ರೋ ಅಲ್ವರೆಝ್‌ ಅನ್ನುವವರು ಟ್ವೀಟ್‌ ಮಾಡಿದ್ದ ವೀಡಿಯೋದಲ್ಲಿ ಸ್ಪಷ್ಟವಾಗಿದೆ. ಕೇವಲ ಭಾರತದ ಧ್ವಜ ಮಾತ್ರವಲ್ಲದೇ ಇಸ್ರೇಲ್‌ ಧ್ವಜವೂ ಸಂಸತ್‌ ಭವನದ ಮೇಲೆ ದಾಳಿ ಮಾಡಿದ ದಾಳಿಕೋರರ ಕೈಯಲ್ಲಿದ್ದುದು ಈ ವೀಡಿಯೋ ಮುಖಾಂತರ ತಿಳಿದು ಬಂದಿದೆ.

ಸಾಮಾಜಿಕ ತಾಣದಾದ್ಯಂತ ಈ ಕುರಿತಾದಂತೆ ಬಳಕೆದಾರರು ಆಕ್ರೋಶ ವ್ಯಕ್ತಪಡಿಸುತ್ತಿರುವ ಮಧ್ಯೆ ಬಿಜೆಪಿ ಪಕ್ಷದ ಸಂಸದ ವರುಣ್‌ ಗಾಂಧಿಯೂ ಟ್ವೀಟ್‌ ಮಾಡಿದ್ದು, "ದಾಳಿಕೋರರ ಕೈಯಲ್ಲಿ ಭಾರತದ ಧ್ವಜವಿರುವುದು ಯಾಕೆ? ನಾವು ಇಂತಹಾ ದಂಗೆಗಳಲ್ಲಿ ನಮ್ಮ ಪ್ರಾತಿನಿಧ್ಯ ತೋರಿಸುವ ಅಗತ್ಯವಿರಲಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಅಮೆರಿಕಾ ಸಂಸತ್‌ ನ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ  ಭಾರತ ಮತ್ತು ಇಸ್ರೇಲ್‌ ನ ಧ್ವಜಗಳು ಹೆಮ್ಮೆಯಿಂದ ಹಾರಾಡುತ್ತಿರುವುದರಲ್ಲಿ ನಾವೇನು ಅಚ್ಚರಿಪಡಬೇಕಾದ ಅಗತ್ಯವಿಲ್ಲ" ಎಂದು ಟ್ವಿಟರ್‌ ಬಳಕೆದಾರರೋರ್ವರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News