ಕೋವ್ಯಾಕ್ಸಿನ್‌ನ ಮೂರನೇ ಹಂತದ ಟ್ರಯಲ್‌ಗೆ 25,000ಕ್ಕೂ ಅಧಿಕ ಸ್ವಯಂಸೇವಕರ ನೋಂದಣಿ
ಹೊಸದಿಲ್ಲಿ, ಜ.7: ತನ್ನ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್‌ನ ಮೂರನೇ ಹಂತದ ಟ್ರಯಲ್‌ಗಾಗಿ 25,800 ಸ್ವಯಂಸೇವಕರನ್ನು ನೋಂದಣಿ ಮಾಡಿಕೊಂಡಿರುವುದಾಗಿ ಹೈದರಾಬಾದ್ ಮೂಲದ ಭಾರತ ಬಯೊಟೆಕ್ ಗುರುವಾರ ತಿಳಿಸಿದೆ. ದೇಶದಲ್ಲಿ ಸಾಮೂಹಿಕ ಲಸಿಕೆ ನೀಡಿಕೆ ಅಭಿಯಾನದಲ್ಲಿ ಬಳಕೆಗೆ ಒಪ್ಪಿಗೆ ಪಡೆದುಕೊಂಡಿರುವ ಎರಡು ಲಸಿಕೆ ತಯಾರಿಕೆ ಕಂಪನಿಗಳಲ್ಲಿ ಭಾರತ ಬಯೋಟೆಕ್ ಒಂದಾಗಿದೆ. ಆಕ್ಸ್‌ಫರ್ಡ್ ವಿವಿ ಮತ್ತು ಆ್ಯಸ್ಟ್ರಾಝೆನೆಕಾ ಅಭಿವೃದ್ಧಿಗೊಳಿಸಿರುವ ಕೋವಿಶೀಲ್ಡ್‌ನ್ನು ಭಾರತದಲ್ಲಿ ತಯಾರಿಸುತ್ತಿರುವ ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಇಂತಹ ಇನ್ನೊಂದು ಕಂಪನಿಯಾಗಿದೆ.
ಭಾರತ ಬಯೋಟೆಕ್‌ನ ಅಧ್ಯಕ್ಷ ಕೃಷ್ಣ ಎಲ್ಲ ಅವರು ಜ.5ರಂದು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ,ಕೋವ್ಯಾಕ್ಸಿನ್‌ನ ಪರಿಣಾಮಕಾರಿತ್ವ ವನ್ನು ಪ್ರಶ್ನಿಸಿದ್ದಕ್ಕಾಗಿ ಟೀಕಾಕಾರರನ್ನು ತರಾಟೆಗೆತ್ತಿಕೊಂಡಿದ್ದರು.
ಕೋವ್ಯಾಕ್ಸಿನ್ ಈಗಾಗಲೇ ಅಗತ್ಯ ಮೂರು ಹಂತಗಳ ಟ್ರಯಲ್‌ಗಳ ಪೈಕಿ ಎರಡನ್ನು ಪೂರ್ಣಗೊಳಿಸಿದೆ. ಲಸಿಕೆಯ ಪರಿಣಾಮಕಾರಿತ್ವವನ್ನು ಒರೆಗೆ ಹಚ್ಚುವ ಮೂರನೇ ಟ್ರಯಲ್ ಕಳೆದ ವರ್ಷದ ನವೆಂಬರ್‌ನಲ್ಲಿ ಆರಂಭಗೊಂಡಿತ್ತು.
ಕಂಪನಿಯು ವಾರ್ಷಿಕ ಒಟ್ಟು 70 ಕೋಟಿ ಡೋಸ್ ಉತ್ಪಾದನೆ ಸಾಮರ್ಥ್ಯದ ನಾಲ್ಕು ಲಸಿಕೆ ತಯಾರಿಕೆ ಘಟಕಗಳನ್ನು ಸ್ಥಾಪಿಸಲಿದೆ. ಕಂಪನಿಯ ಬಳಿ ಸದ್ಯ ಎರಡು ಕೋಟಿ ಡೋಸ್‌ಗಳ ದಾಸ್ತಾನು ಇದೆ ಎಂದು ಎಲ್ಲ ತಿಳಿಸಿದ್ದರು.
ಇದೇ ವೇಳೆ,ತನ್ನ ಬಳಿ ಐದು ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಿದೆ ಎಂದು ಸೀರಮ್ ತಿಳಿಸಿದೆ.