×
Ad

ಭೂಗತ ಪಾತಕಿ ಅಬು ಸಲೀಂ ಮನವಿ ತಿರಸ್ಕೃರಿಸಿದ ಸುಪ್ರೀಂ

Update: 2021-01-07 23:58 IST

 ಹೊಸದಿಲ್ಲಿ, ಜ. 7: ತನ್ನನ್ನು 2005ರಲ್ಲಿ ಪೋರ್ಚುಗಲ್‌ನಿಂದ ಗಡಿಪಾರು ಮಾಡಿರುವುದು ಕಾನೂನುಬಾಹಿರ ಎಂದು ಪ್ರತಿಪಾದಿಸಿದ ಹಾಗೂ ಭಾರತೀಯ ಅಧಿಕಾರಿಗಳು ಷರತ್ತುಗಳನ್ನು ಉಲ್ಲಂಘಿಸಿರುವುದರಿಂದ ಅದು ರದ್ದುಗೊಳಿಸಲು ಅರ್ಹವಾಗಿದೆ ಎಂದು 1993ರ ಮುಂಬೈ ಸ್ಫೋಟ ಪ್ರಕರಣದ ದೋಷಿ ಅಬು ಸಲೀಂ ಸಲ್ಲಿಸಿದ ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.

ಈ ಬಗ್ಗೆ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ಅಬು ಸಲೀಂಗೆ ಸೂಚಿಸಿದೆ.

 ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವ ಸ್ವಾತಂತ್ರ್ಯದೊಂದಿಗೆ ಕಲಂ 32ರ ಅಡಿಯಲ್ಲಿ ನಾವು ಮನವಿಯನ್ನು ವಜಾಗೊಳಿಸುತ್ತೇವೆ ಎಂದು ಪೀಠ ಹೇಳಿದೆ.

ಆ್ಯಮಿಕಸ್‌ಕ್ಯೂರಿ(ನ್ಯಾಯಾಲಯದ ಸಲಹೆಗಾರ)ಯೊಂದಿಗೆ ಮಾತನಾಡಲು ಹಾಗೂ ಕೆಲವು ದಾಖಲೆಗಳನ್ನು ಪಡೆದುಕೊಳ್ಳಲು ಸಲೀಂನನ್ನು ಮಹಾರಾಷ್ಟ್ರದ ತಲೋಜಾ ಕಾರಾಗೃಹದಿಂದ ದಿಲ್ಲಿಯ ತಿಹಾರ್ ಕಾರಾಗೃಹಕ್ಕೆ ವರ್ಗಾಯಿಸಲು ನಿರ್ದೇಶನ ನೀಡುವಂತೆ ಮನವಿ ಕೋರಿದೆ.

ಗಡಿಪಾರು ಒಪ್ಪಂದವನ್ನು ಭಾರತೀಯ ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ಮನವಿ ವಾದಿಸಿದೆ.

1993ರ ಮುಂಬೈ ಸರಣಿ ಸ್ಫೋಟದ ದೋಷಿಯಾಗಿದ್ದ ಸಲೀಂನನ್ನು ದೀರ್ಘಕಾಲದ ಕಾನೂನು ಹೋರಾಟದ ಬಳಿಕ 2005 ನವೆಂಬರ್ 1ರಂದು ಪೋರ್ಚುಗಲ್‌ನಿಂದ ಗಡಿಪಾರು ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News