ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಪ್ರಹಾರ: ಟ್ರಂಪ್ ವಿರುದ್ಧ ಬೈಡೆನ್ ವಾಗ್ದಾಳಿ

Update: 2021-01-08 04:53 GMT

ವಾಷಿಂಗ್ಟನ್, ಜ.8: ಯುಎಸ್ ಕ್ಯಾಪಿಟಲ್ ಮೇಲೆ ಗುರುವಾರ ದಾಳಿ ನಡೆಸಿದವರನ್ನು ದೇಶೀಯ ಭಯೋತ್ಪಾದಕರು ಎಂದು ಬಣ್ಣಿಸಿರುವ ಅಮೆರಿಕದ ಭಾವಿ ಅಧ್ಯಕ್ಷ ಜೋಯ್ ಬೈಡೆನ್, ಇಡೀ ದೇಶವನ್ನೇ ತಲ್ಲಣಗೊಳಿಸಿದ ದಾಳಿ ಮತ್ತು ಹಿಂಸಾಚಾರಕ್ಕೆ ನಿರ್ಗಮಿಸುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ನೇರ ಹೊಣೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಟ್ರಂಪ್ ಬೆಂಬಲಿಗರು ಅಮೆರಿಕ ಸಂಸತ್ತಿನ ಭದ್ರತಾ ಗೋಡೆಯನ್ನು ಬೇಧಿಸಿ ದಾಳಿ ನಡೆಸಿರುವುದು "ಭಿನ್ನಾಭಿಪ್ರಾಯವೂ ಅಲ್ಲ; ಅವ್ಯವಸ್ಥೆಯೂ ಅಲ್ಲ; ಪ್ರತಿಭಟನೆ ಕೂಡಾ ಅಲ್ಲ. ದೊಡ್ಡ ಅರಾಜಕತೆ" ಎಂದು ಅಭಿಪ್ರಾಯಪಟ್ಟಿದ್ದಾರೆ. ಕ್ಯಾಪಿಟಲ್ ಹಿಲ್‌ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿ ಸಂಸತ್ತಿನ ಜಂಟಿ ಅಧಿವೇಶನಕ್ಕೆ ಅಡ್ಡಿಯುಂಟು ಮಾಡಲು ಯತ್ನಿಸಿದ ಶಕ್ತಿಗಳು ಪ್ರತಿಭಟನಾಕಾರರಲ್ಲ; ಗಲಭೆಕೋರರು; ದಂಗೆಕೋರರು, ದೇಶೀಯ ಭಯೋತ್ಪಾದಕರು ಎಂದು ಹೇಳಿದರು.

ಅಧ್ಯಕ್ಷ ಅವಧಿಯುದ್ದಕ್ಕೂ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಯನ್ನು ಬುಡಮೇಲು ಮಾಡಲು ಟ್ರಂಪ್ ಕೈಗೊಂಡ ಕ್ರಮಗಳು ಅಪಾಯಕಾರಿ ಎಂದು ಕಟು ಶಬ್ದಗಳಲ್ಲಿ ಟೀಕಿಸಿದರು.

"ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ದೇಶದ ಕಾನೂನಿಗೆ ಅಗೌರವ ತೋರಿರುವುದು ಅವರ ಕಾರ್ಯಗಳಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಒಟ್ಟಾರೆಯಾಗಿ ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ. ನಿನ್ನೆ ನಡೆದ ಘಟನೆ ನಿರ್ದಯ ದಾಳಿಯ ಪರಾಕಾಷ್ಠೆ" ಎಂದು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News