ಅಮೆರಿಕ ಸಂಸತ್‌ ದಾಳಿಕೋರರ ಕೈಯಲ್ಲಿ ಭಾರತದ ಧ್ವಜ: ಬಿಜೆಪಿ ಸಂಸದ ವರುಣ್‌ ಗಾಂಧಿ-ಶಶಿ ತರೂರ್‌ ನಡುವೆ ವಾಕ್ಸಮರ

Update: 2021-01-08 11:14 GMT

ಹೊಸದಿಲ್ಲಿ,ಜ.08: ಗುರುವಾರ ಅಮೆರಿಕಾದ ಸಂಸತ್ ಕಟ್ಟಡದ ಮೇಲೆ ನೂರಾರು ಟ್ರಂಪ್ ಬೆಂಬಲಿಗರು ನಡೆಸಿದ ದಾಳಿ ಸಂದರ್ಭ ಭಾರತದ ರಾಷ್ಟ್ರಧ್ವಜವೂ ಕಾಣಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಹಾಗೂ ಬಿಜೆಪಿ ನಾಯಕ ವರುಣ್ ಗಾಂಧಿ ನಡುವೆ ಸ್ವಾರಸ್ಯಕರ ವಾಕ್ಸಮರಕ್ಕೆ ನಾಂದಿಯಾಯಿತು.

ಕ್ಯಾಪಿಟೊಲ್ ಹಿಲ್‍ನಲ್ಲಿ ಇಂತಹ ಗೊಂದಲಮಯ ಹಾಗೂ ಸಂಘರ್ಷಮಯ ಸನ್ನಿವೇಶದ ಸಂದರ್ಭ ಭಾರತದ ತ್ರಿವರ್ಣ ಧ್ವಜ ಹೇಗೆ ಕಾಣಿಸಿಕೊಂಡಿತು ಎಂದು ಹಲವರಂತೆ ವರುಣ್ ಗಾಂಧಿ ಕೂಡ ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಶಶಿ ತರೂರ್ "ಟ್ರಂಪ್ ಬೆಂಬಲಿಗ ಗುಂಪಿನವರದ್ದೇ ಮನೋಸ್ಥಿತಿಯ ಕೆಲವು ಭಾರತೀಯರೂ ಇದ್ದಾರೆ. ಅವರು ದೇಶದ ಧ್ವಜವನ್ನು ತಮ್ಮ ಅಭಿಮಾನದ ಸಂಕೇತ ಎಂದು ಭಾವಿಸುವ ಬದಲು ಅದನ್ನೇ ಆಯುಧವನ್ನಾಗಿ ಮಾಡಿಕೊಳ್ಳುತ್ತಾರೆ " ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮತ್ತೆ ಇದಕ್ಕೆ ಉತ್ತರಿಸಿದ ವರುಣ್ ಗಾಂಧಿ "ನಮ್ಮ ದೇಶದ ಮೇಲೆ ನಮಗಿರುವ ಅಭಿಮಾನವನ್ನು ತೋರಿಸಲು ರಾಷ್ಟ್ರಧ್ವಜವನ್ನು ಹಾರಿಸುವ ಭಾರತೀಯರನ್ನೂ  ಟೀಕಿಸುವುದು ಈ ದಿನಗಳಲ್ಲಿ ಸುಲಭವಾಗಿ ಬಿಟ್ಟಿದೆ. ಅದೇ ಸಮಯ ನಮ್ಮ ಧ್ವಜವನ್ನು ಕೆಲ  ಕೆಟ್ಟ ಉದ್ದೇಶಗಳಿಗೂ ಬಳಸುವುದು ಸುಲಭವಾಗಿ ಬಿಟ್ಟಿದೆ.  ಭಾರತದಲ್ಲಿ ಕೂಡ ದೇಶ ವಿರೋಧಿ ಪ್ರತಿಭಟನೆಗಳಲ್ಲಿ ರಾಷ್ಟ್ರಧ್ವಜದ ದುರ್ಬಳಕೆ ಕುರಿತ ಎಚ್ಚರಿಕೆಗಳನ್ನು ಹೆಚ್ಚಿನ  ಉದಾರವಾದಿಗಳು ಕಡೆಗಣಿಸಿದ್ದಾರೆ (ಉದಾ ಜೆಎನ್‍ಯುವಿನಲ್ಲಿ). ನಮಗೆ ಅದು ಅಭಿಮಾನದ ಸಂಕೇತ ಹಾಗೂ ಯಾವುದೇ ʼಮನೋಸ್ಥಿತಿ'ಗೆ ತಕ್ಕ ಮನ್ನಣೆಯೊಂದಿಗೆ ನಾವು ನಮ್ಮ ರಾಷ್ಟ್ರಧ್ವಜವನ್ನು ಗೌರವಿಸುತ್ತೇವೆ,'' ಎಂದು  ಬರೆದಿದ್ದಾರೆ.

ಈ ವಾಕ್ಸಮರವನ್ನು ಗಮನಿಸಿದ ಕ್ಯಾಪಿಟೊಲ್ ಹಿಲ್‍ನಲ್ಲಿ ಭಾರತದ ರಾಷ್ಟ್ರಧ್ವಜದೊಂದಿಗೆ ಕಾಣಿಸಿದ ವ್ಯಕ್ತಿ ಎಂದು ಹೇಳಲ್ಪಡುತ್ತಿರುವ ವಿನ್ಸೆಂಟ್ ಕ್ಸೇವಿಯರ್  ಪೋಸ್ಟ್ ಮಾಡಿ "ಚುನಾವಣೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂದು ನಂಬುವ ಅಮೆರಿಕಾದ ದೇಶಾಭಿಮಾನಿಗಳು, ವಿಯೆಟ್ನಾಮೀಯರು, ಭಾರತೀಯರು, ಕೊರಿಯನ್ನರು ಹಾಗೂ ಇರಾನ್ ಮೂಲದವರು ಹಾಗೂ ಇತರ ಹಲವು ದೇಶಗಳು ಹಾಗೂ ಜನಾಂಗದವರು ಟ್ರಂಪ್ ಬೆಂಬಲಾರ್ಥ ರ್ಯಾಲಿಯಲ್ಲಿ ಪಾಲ್ಗೊಂಡರು. ಶಾಂತಿಯುತ ಪ್ರತಿಭಟನಾಕಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ," ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News