×
Ad

ದೋಷಿ ರಾಜೋನಾ ಸಲ್ಲಿಸಿದ ಮನವಿ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2021-01-08 22:32 IST

ಹೊಸದಿಲ್ಲಿ, ಜ. 8: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ರದ್ದುಗೊಳಿಸಿ ಕಡಿಮೆ ಶಿಕ್ಷೆ ನೀಡಬೇಕು ಎಂದು ಕೋರಿ ಬಲ್ವಂತ್ ಎಸ್. ರಾಜೋನಾ ಸಲ್ಲಿಸಿದ ಮನವಿಯ ಕುರಿತು ಜನವರಿ 26ರ ಮುನ್ನ ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ, ಈ ನಿರ್ಧಾರವನ್ನು ಪ್ರಜಾಪ್ರಭುತ್ವ ದಿನದ ಮುನ್ನ ತೆಗೆದುಕೊಳ್ಳಬೇಕು. ಇದು ಉತ್ತಮ ದಿನ ಎಂದಿದೆ. ‘‘ನಾವು ಎರಡು ಮೂರು ವಾರಗಳನ್ನು ನೀಡುತ್ತೇವೆ. ಜನವರಿ 26ರ ಮುನ್ನ ನೀವು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಜನವರಿ 26 ಉತ್ತಮ ದಿನ. ಒಂದು ವೇಳೆ ನೀವು ಇದಕ್ಕಿಂತ ಮುನ್ನ ನಿರ್ಧಾರ ತೆಗೆದುಕೊಂಡರೆ, ಅದು ಇನ್ನೂ ಸೂಕ್ತ’’ ಎಂದು ಪೀಠ ಹೇಳಿದೆ.

ಬಿಯಾಂತ್ ಸಿಂಗ್ ಹಾಗೂ ಇತರ 16 ಮಂದಿಯ ಸಾವಿಗೆ ಕಾರಣವಾಗಿದ್ದ ಪಂಜಾಬ್‌ನ ನಾಗರಿಕ ಕಾರ್ಯಾಲಯದ ಹೊರಗೆ 1995ರಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಪಂಜಾಬ್‌ನ ಮಾಜಿ ಪೊಲೀಸ್ ಕಾನ್ಸ್‌ಟೇಬಲ್ ರಾಜೋನಾನನ್ನು ದೋಷಿ ಎಂದು ನ್ಯಾಯಾಲಯ ಪರಿಗಣಿಸಿತ್ತು. ರಾಜೋನಾ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ತನ್ನ ಕಕ್ಷಿದಾರನ ಕ್ಷಮಾದಾನ ಮನವಿ 2012ರಿಂದ ಬಾಕಿ ಇದೆ ಎಂದು ವಾದಿಸಿದರು. ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಾಗರಾಜ್, ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು ಹಾಗೂ ಕಡತವನ್ನು ರಾಷ್ಟ್ರಪತಿ ಅವರಿಗೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News