×
Ad

ಪ್ರತಿಷ್ಠಿತ ಸಂಸ್ಥೆಗಳಿಗೆ ಸಾಗರೋತ್ತರ ಕ್ಯಾಂಪಸ್ ತೆರೆಯಲು ಅನುಮತಿ: ಹೊಸ ನಿಯಮ ಪ್ರಕಟಿಸಿದ ಯುಜಿಸಿ

Update: 2021-01-08 23:02 IST

ಹೊಸದಿಲ್ಲಿ, ಜ.8: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈಯನ್ಸ್‌ನಂತಹ ದೇಶದ ಪ್ರತಿಷ್ಠಿತ ಸಂಸ್ಥೆಗಳಿಗೆ ದೇಶದ ಹೊರಗಡೆ ಕ್ಯಾಂಪಸ್ ಆರಂಭಿಸಲು ಅವಕಾಶ ನೀಡಲಾಗಿದೆ. ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್(ಶ್ರೇಷ್ಟ ಸಂಸ್ಥೆಗಳು)ಗೆ ಸಂಬಂಧಿಸಿದ ನಿಯಮಕ್ಕೆ ಯುಜಿಸಿ (ವಿವಿ ಅನುದಾನ ಆಯೋಗ) ತಿದ್ದುಪಡಿ ತಂದಿದ್ದು, ವಿದೇಶದಲ್ಲಿ ಕ್ಯಾಂಪಸ್ ಆರಂಭಿಸಲು ಅವಕಾಶ ನೀಡುವ ಹೊಸ ಅನುಚ್ಛೇದವನ್ನು ಸೇರಿಸಲಾಗಿದೆ.

ಗುರುವಾರ ಹೊಸ ಯುಜಿಸಿ (ಇನ್‌ಸ್ಟಿಟ್ಯೂಟ್ ಆಫ್ ಎಮಿನೆಸ್ ಡೀಮ್ಡ್ ವಿವಿ)(ತಿದ್ದುಪಡಿ) ನಿಯಮ 2021ನ್ನು ಪ್ರಕಟಿಸಲಾಗಿದೆ. ಐಐಟಿ ಬಾಂಬೆ, ಐಐಟಿ ದಿಲ್ಲಿ, ಐಐಟಿ ಮದ್ರಾಸ್, ಐಐಟಿ ಖರಗಪುರ, ಭಾರತೀಯ ವಿಜ್ಞಾನ ಸಂಸ್ಥೆ, ಹೈದರಾಬಾದ್ ವಿವಿ ಸೇರಿದಂತೆ 10 ಸರಕಾರಿ ಮತ್ತು 10 ಖಾಸಗಿ ಸಂಸ್ಥೆಗಳನ್ನು ಪ್ರತಿಷ್ಠಿತ ಸಂಸ್ಥೆ ಎಂದು ಕೇಂದ್ರ ಸರಕಾರ ಈಗಾಗಲೇ ಘೋಷಿಸಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾರತದ ಹೊರಗಡೆ ಕ್ಯಾಂಪಸ್ ಆರಂಭಿಸಲು ಅವಕಾಶ ಇರುವುದರಿಂದ, ಈ ಅವಕಾಶ ಬಳಸಿಕೊಳ್ಳಲು ಆಸಕ್ತಿಯಿದೆಯೇ ಎಂದು 2020ರ ಆಗಸ್ಟ್‌ನಲ್ಲಿ ಕೇಂದ್ರ ಸರಕಾರ ಪ್ರಶ್ನಿಸಿತ್ತು.

ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳ ಅಭಿಪ್ರಾಯ ಪಡೆದ ಬಳಿಕ ನಿಯಮಕ್ಕೆ ತಿದ್ದುಪಡಿ ತರಲಾಗಿದೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆ 5 ವರ್ಷದಲ್ಲಿ ಗರಿಷ್ಠ 3 ಸಾಗರೋತ್ತರ ಕ್ಯಾಂಪಸ್ ಆರಂಭಿಸಬಹುದು. ವರ್ಷಕ್ಕೆ ಒಂದಕ್ಕಿಂತ ಹೆಚ್ಚು ಕ್ಯಾಂಪಸ್ ಆರಂಭಿಸುವಂತಿಲ್ಲ ಎಂದು ಸೂಚಿಸಲಾಗಿದೆ. ಸಾಗರೋತ್ತರ ಕ್ಯಾಂಪಸ್ ಆರಂಭಿಸಲು ಆಸಕ್ತಿ ಇರುವ ಸಂಸ್ಥೆಗಳು 10 ವರ್ಷದ ಕಾರ್ಯತಂತ್ರ ಪರಿಕಲ್ಪನಾ ಯೋಜನೆ ಮತ್ತು 5 ವರ್ಷದ ಜಾರಿ ಯೋಜನೆ(ಪಠ್ಯಕ್ರಮದ ಯೋಜನೆ, ಬೋಧಕ ವರ್ಗದ ನೇಮಕಾತಿ, ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ, ಸಂಶೋಧನೆ, ಮೂಲಸೌಕರ್ಯ ಅಭಿವೃದ್ಧಿ, ಆರ್ಥಿಕ ಮತ್ತು ಆಡಳಿತಾತ್ಮಕ ವಿವರಗಳ ಮಾಹಿತಿ ನೀಡುವ ಯೋಜನೆ) ಸಹಿತ ಕೇಂದ್ರ ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಬೋಧಕ ವರ್ಗದಲ್ಲಿ ಕನಿಷ್ಠ 60ಶೇ. ಕಾಯಂ ನೇಮಕಾತಿ ಇರಬೇಕು. ರೆಗ್ಯುಲರ್ ತರಗತಿಗೆ ಕನಿಷ್ಠ 500 ವಿದ್ಯಾರ್ಥಿಗಳು ಪ್ರವೇಶ ಪಡೆದಿರಬೇಕು ಮತ್ತು ಇವರಲ್ಲಿ ಮೂರನೇ ಒಂದರಷ್ಟು ಸ್ನಾತಕೋತ್ತರ/ಸಂಶೋಧನಾ ವಿದ್ಯಾರ್ಥಿಗಳಾಗಿರಬೇಕು. ಪ್ರತೀ ವಿದ್ಯಾರ್ಥಿಗೆ ಕನಿಷ್ಠ 30 ಚದರಡಿ ಸ್ಥಳಾವಕಾಶ ಇರುವ ಕ್ಯಾಂಪಸ್‌ನಲ್ಲಿ ತರಗತಿ ಕೊಠಡಿ, ವಾಚನಾಲಯ, ಶೈಕ್ಷಣಿಕ ಕೊಠಡಿ, ಪ್ರಯೋಗಾಲಯ, ಹಾಸ್ಟೆಲ್, ಬೋಧಕರ ವಸತಿ, ಆರೋಗ್ಯ ವ್ಯವಸ್ಥೆ, ಮನರಂಜನೆಯ ಸೌಕರ್ಯ ಇರಬೇಕು ಎಂದು ನೂತನ ನಿಯಮದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News