ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು 4 ತಿಂಗಳ ಬಳಿಕ ಯುವಕನ ಬಂಧನ: ಪ್ರಕರಣದ ಸುತ್ತ ಸಂಶಯ

Update: 2021-01-08 17:51 GMT

ಹೊಸದಿಲ್ಲಿ,ಜ.8: ಅಪ್ರಾಪ್ತ ವಯಸ್ಸಿನ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ 28 ವರ್ಷ ವಯಸ್ಸಿನ ಯುವಕನನ್ನು ಉತ್ತರಪ್ರದೇಶದ ಸಹರಣ್‌ಪುರದಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ಇಖ್ಲಾಕ್ ಸಲ್ಮಾನಿ ಎಂದು ಗುರುತಿಸಲಾಗಿದ್ದು, ಆತನನ್ನು ಜನವರಿ 5ರಂದು ಹರ್ಯಾಣದ ಪಾಣಿಪತ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು theprint.in ವರದಿ ತಿಳಿಸಿದೆ.  

ಆದರೆ ಇಖ್ಲಾಕ್‌ನ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪವನ್ನು ಆತನ ಕುಟುಂಬಿಕರು ತಳ್ಳಿಹಾಕಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ದುಷ್ಕರ್ಮಿಗಳ ಗುಂಪೊಂದು ಹರ್ಯಾಣದಲ್ಲಿ ಕೆಲಸಕ್ಕೆಂದು ತೆರಳಿದ್ದ ಇಖ್ಲಾಕ್‌ನನ್ನು ಮುಸ್ಲಿಮನೆಂದು ಗುರುತಿಸಿ, ಆತನನ್ನು ಬರ್ಬರವಾಗಿ ಥಳಿಸಿತ್ತು ಹಾಗೂ ಆತನ ಬಲ ತೋಳನ್ನು ಕಡಿದುಹಾಕಿತ್ತೆಂದು ಅವರು ಹೇಳಿದ್ದಾಗಿ ವರದಿಯಲ್ಲಿ ಉಲ್ಲೇಖಿಸಿದೆ.

ಬಾಲಕನ ವಿರುದ್ಧ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂಬ ಆರೋಪದಲ್ಲಿ ಇಖ್ಲಾಕ್ ವಿರುದ್ಧ ಸೆಪ್ಟೆಂಬರ್ 7ರಂದು ಪೋಸ್ಕೊ ಕಾಯ್ದೆಯ 6 ಹಾಗೂ 18ನೇ ಸೆಕ್ಷನ್‌ಗಳಡಿ ಪ್ರಕರಣವನ್ನು ದಾಖಲಿಸಲಾಗಿತ್ತು. ಇಖ್ಲಾಕ್ ಸಲ್ಮಾನಿಯ ಮೂವರು ಸೋದರರು ಹಾಗೂ ಸೋದರಳಿಯನನ್ನು ಕೂಡಾ ಸಹರಣ್ಪುರ ಪೊಲೀಸರು ಬಂಧಿಸಿದ್ದು, ಅವರನ್ನು ಉತ್ತರಪ್ರದೇಶದ ದಿಯದಾನ್ ಜೈಲಿನಲ್ಲಿರಿಸಲಾಗಿದೆ.

 ಪೊಲೀಸರು ತನಿಖೆಯನ್ನು ನ್ಯಾಯಯುತವಾಗಿ ನಡೆಸುತ್ತಿಲ್ಲ ಹಾಗೂ ಆತನ ಮೇಲೆ ಪಾಣಿಪತ್‌ನಲ್ಲಿ ಹಲ್ಲೆ ನಡೆಸಿದವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲವೆಂದು ಇಖ್ಲಾಕ್‌ನ ವಕೀಲ ಅರ್ಜುನ್ ಶೆರೋನ್ ಆರೋಪಿಸಿದ್ದಾರೆ. ಪ್ರಕರಣದಲ್ಲಿ ಅರ್ಜಿದಾರನಾದ ಇಖ್ಲಾಕ್‌ನ ಮೇಲೆ ಒತ್ತಡ ಹೇರುವ ಸಲುವಾಗಿ 14 ದಿನಗಳ ಅಂತರದ ಬಳಿಕ ಆಧಾರ ರಹಿತವಾಗಿ ಆತನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ದಾಖಲಿಸಲಾಗಿದೆ ಎಂದು ಶೆರೊನ್ ದೂರಿದ್ದಾರೆ ಎಂದು ವರದಿ ತಿಳಿಸಿದೆ.

ಕೋಮುದ್ವೇಷದಿಂದ ಇಖ್ಲಾಕ್ ಮೇಲೆ ಹಲ್ಲೆ: ಕುಟುಂಬಿಕರ ಆರೋಪ

ವೃತ್ತಿಯಲ್ಲಿ ಕ್ಷೌರಿಕನಾಗಿದ್ದ ಇಖ್ಲಾಕ್, ಕೆಲಸ ಹುಡುಕಿಕೊಂಡು ಪಾಣಿಪತ್‌ನ ಕಿಶನ್‌ಪುರಕ್ಕೆ ತೆರಳಿದ್ದನು. ಕುಡಿಯುವ ನೀರು ಕೇಳಲು ಮನೆಯೊಂದರ ಬಾಗಿಲು ಬಡಿದಾಗ, ನಾಲ್ವರ ಗುಂಪೊಂದು ಆತನ ಮೇಲೆ ದೊಣ್ಣೆ ಹಾಗೂ ಇಟ್ಟಿಗೆಗಳಿಂದ ದಾಳಿ ನಡೆಸಿತ್ತು. ಇಖ್ಲಾಕ್‌ನನ್ನು ಸಮೀಪದ ಮಿಲ್‌ಯಂತ್ರದ ಬಳಿಗೆ ಎಳೆದೊಯ್ದು ಆತನ ಬಲಗೈ ತೋಳನ್ನು ಗರಗಸ ಯಂತ್ರದಿಂದ ಕತ್ತರಿಸಿ ಹಾಕಿತ್ತು. ಪ್ರಜ್ಞೆ ಕಳೆದುಕೊಂಡಿದ್ದ ಆತನನ್ನು ಸಮೀಪದ ರೈಲು ಹಳಿಗಳಲ್ಲಿ ಎಸೆದು ಹೋಗಿತ್ತೆಂದು ಇಖ್ಲಾಕ್‌ನ ಕುಟುಂಬಿಕರು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

ಆತನ ಬಲಗೈಯಲ್ಲಿ ಇಸ್ಲಾಂ ಧರ್ಮದ ಸಂಕೇತವಿರುವ ಹಚ್ಚೆಯೊಂದನ್ನು ಕಂಡ ದುಷ್ಕರ್ಮಿಗಳು ಕೋಮುದ್ವೇಷದಿಂದ ಹಲ್ಲೆ ನಡೆಸಿದ್ದಾರೆಂದು ಇಖ್ಲಾಕ್‌ನ ಸೋದರ ಇಕ್ರಂ ಆರೋಪಿಸಿದ್ದಾರೆ. ಆದರೆ ಸೆಪ್ಟೆಂಬರ್ 7ರಂದು ಇಖ್ಲಾಕ್‌ಗೆ ಥಳಿಸಿದ ದುಷ್ಕರ್ಮಿಗಳ ಗುಂಪೊಂದು ಸಲ್ಲಿಸಿದ ಎಫ್‌ಐಆರ್‌ನಲ್ಲಿ.ಆತ 23ರ ಆಗಸ್ಟ್‌ನಲ್ಲಿ ತಮ್ಮ ಕುಟುಂಬಕ್ಕೆ ಸೇರಿದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ಮತ್ತು ಆನಂತರ ಪರಾರಿಯಾಗುತ್ತಿದ್ದಾಗ ಆತ ರೈಲ್ವೆ ಹಳಿಯಲ್ಲಿ ಬಿದ್ದು ಗಾಯಗೊಂಡಿದ್ದನೆಂದು ಹೇಳಿದೆ.

 ಈ ಎರಡೂ ಪ್ರಕರಣಗಳ ತನಿಖೆಗಾಗಿ ಹರ್ಯಾಣ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News