×
Ad

ಟ್ರಯಲ್ ರೈಲಿನಡಿ ಸಿಲುಕಿ ಎಂಬಿಎ,ಐಟಿಐ ಪದವೀಧರರು ಸಹಿತ ನಾಲ್ವರು ಬಲಿ

Update: 2021-01-09 14:58 IST

ಡೆಹ್ರಾಡೂನ್: ಎರಡು ವರ್ಷಗಳಿಂದ ಬಳಸದೇ ಉಳಿದಿದ್ದ ರೈಲು ಹಳಿ ಮೇಲೆ ಟ್ರಯಲ್ ನಡೆಸುತ್ತಿದ್ದ ರೈಲೊಂದು ಹಳಿ ಮೇಲೆ ಕುಳಿತು ತಮ್ಮ ಭವಿಷ್ಯದ ಕುರಿತು ಚರ್ಚಿಸುತ್ತಿದ್ದ ನಾಲ್ವರು ಯುವಕರ ಮೇಲೆ ಹರಿದಿರುವ ಹೃದಯವಿದ್ರಾವಕ ಘಟನೆ ಉತ್ತರಾಖಂಡ ರಾಜ್ಯದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಮೃತಪಟ್ಟ ಯುವಕರಲ್ಲಿ ಓರ್ವ ಎಂಬಿಎ ಪದವೀಧರನಾಗಿದ್ದರೆ, ಇಬ್ಬರು ಐಟಿಐ ಪದವೀಧರರು ಹಾಗೂ ಓರ್ವ ಫಾರ್ಮಸಿ ವಿದ್ಯಾರ್ಥಿಯಾಗಿದ್ದ. 
ದಾಬಾದಲ್ಲಿ ಕಷ್ಟಪಟ್ಟು ಗಳಿಸಿದ್ದ ಹಣದಲ್ಲಿ ಶಿಶಿಪಾಲ್ ಅವರು 23ರ ವಯಸ್ಸಿನ ಮಗ ಮಯೂರ್ಗೆ ಶಿಕ್ಷಣ ನೀಡಿದ್ದರು. ಮಯೂರ್ ಕಳದ ವರ್ಷ ಗುರುಕುಲ ಕಾಂಗ್ರಿ ಯುನಿವರ್ಸಿಟಿಯಲ್ಲಿ  ಎಂಬಿಎ ಡಿಗ್ರಿ ಪಡೆದಿದ್ದರು. ಇದೇ ಯುನಿವರ್ಸಿಟಿಯಿಂದ ವಿಶಾಲ್(24)ಬಿ ಫಾರ್ಮ್ ವಿದ್ಯಾರ್ಥಿಯಾಗಿದ್ದ. ಈತನ ತಂದೆ ನಗರ ನಿಗಮದಲ್ಲಿ ಕೆಲಸ ಮಾಡುತ್ತಿದ್ದರು. ಪ್ರವೀಣ್(22 ವರ್ಷ)ತಂದೆ ಕೃಷಿಕರಾಗಿದ್ದು, 22ರ ವರ್ಷದ ಹ್ಯಾಪ್ಪಿಯ ತಂದೆ ಗುತ್ತಿಗೆ ಕಾರ್ಮಿಕರಾಗಿದ್ದರು. ಈ  ಇಬ್ಬರೂ ಐಟಿಐ ಪದವೀಧರಾಗಿದ್ದರು.

ಈ ನಾಲ್ವರು ಜಮಾಲ್ಪುರದ ಕಲಾನ್ ನಲ್ಲಿ ಬಳಕೆಯಲ್ಲಿಲ್ಲದ ರೈಲ್ವೆ ಹಳಿ ಮೇಲೆ ಕುಳಿತು ಗುರುವಾರ ಸಂಜೆ 6:30ರ ಸುಮಾರಿಗೆ ಭವಿಷ್ಯದ ಯೋಜನೆಯ ಕುರಿತು ಚರ್ಚಿಸುತ್ತಿದ್ದಾಗ ವೇಗವಾಗಿ ಬಂದ ರೈಲು ಯುವಕರ ಮೇಲೆ ಹರಿದು ಹೋಗಿದೆ.

"ರೈಲು ಹಾರ್ನ್ ಹಾಕಿರಲಿಲ್ಲ. ರೈಲು ಹಳಿಗಳ ಸುತ್ತ ಗೋಡೆಗಳಿಲ್ಲ. ಈ ಹಳಿಯ ಪಕ್ಕದಲ್ಲಿ ಎರಡು ದೊಡ್ಡ ಗ್ರಾಮಗಳಿವೆ. ರೈಲು ಆಕಸ್ಮಿಕವಾಗಿ ಬಂದರೆ ಯಾವ ಸೂಚನೆಯೂ ಸಿಗುವುದಿಲ್ಲ'' ಎಂದು ಸೀತಾಪುರ ಹಳ್ಳಿಯ ಕಾರ್ಪೊರೇಟರ್ ವಿನೀತ್ ಚೌಹಾನ್ ಹೇಳಿದ್ದಾರೆ. ನಾಲ್ವರು ಯುವಕರು ಸೀತಾಪುರ್ ಹಳ್ಳಿಯವರಿದ್ದಾರೆ.

ಶುಕ್ರವಾರ ಉದ್ರಿಕ್ತ ಗ್ರಾಮಸ್ಥರು ಮೂರು ಗಂಟೆಗಳ ಕಾಲ ಹಳಿಯನ್ನು ತಡೆದಿದ್ದರು. ಕುಟುಂಬಸ್ಥರು ನೀಡಿರುವ ದೂರಿನ ಆಧಾರದಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. 3 ಪ್ರತ್ಯೇಕ ತನಿಖೆ ಆರಂಭಿಸಲಾಗಿದೆ ಎಂದು ಹರಿದ್ವಾರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ರೈಲ್ವೆ ಹಳಿಗಳು ರೈಲ್ವೆಯ ಆಸ್ತಿ. ಟ್ರಯಲ್ ರನ್ ಗೆ ನಮಗೆ ಯಾರ ಅನುಮತಿ ಇಲ್ಲವೇ ಒಪ್ಪಿಗೆ ಬೇಕಾಗಿಲ್ಲ. ಟ್ರಯಲ್ ಯೋಜಿತವಾಗಿರುತ್ತದೆ. ಎಲ್ಲ ಭದ್ರತಾ ಶಿಷ್ಟಾಚಾರವನ್ನು ಪಾಲಿಸಲಾಗುತ್ತದೆ ಎಂದು ಮೊರಾದಾಬಾದ್ ವಿಭಾಗೀಯ ವಾಣಿಜ್ಯ ಅಧಿಕಾರಿ ಗೌರವ್ ದೀಕ್ಷಿತ್ ಹೇಳಿದ್ದಾರೆ.
ಸರಕಾರವು ಸಂತ್ರಸ್ತ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News