ಲಡಾಖ್ ನ ಎಲ್ಎಸಿಯಲ್ಲಿ ಚೀನಾದ ಸೈನಿಕನ ಬಂಧನ
Update: 2021-01-09 15:24 IST
ಹೊಸದಿಲ್ಲಿ,ಜ.9: ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಯನ್ನು ದಾಟಿ ಭಾರತೀಯ ಭೂಪ್ರದೇಶದಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದ ಚೀನಾದ ಸೈನಿಕನೋರ್ವನನ್ನು ಪೂರ್ವ ಲಡಾಖ್‌ನ ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ದಂಡೆಯಲ್ಲಿ ಶುಕ್ರವಾರ ಬಂಧಿಸಲಾಗಿದೆ ಎಂದು ಭಾರತೀಯ ಸೇನೆಯು ಶನಿವಾರ ತಿಳಿಸಿದೆ.
ಸ್ಥಾಪಿತ ಶಿಷ್ಟಾಚಾರಗಳಿಗೆ ಅನುಗುಣವಾಗಿ ಬಂಧಿತ ಸೈನಿಕನನ್ನು ನಡೆಸಿಕೊಳ್ಳಲಾಗುತ್ತಿದೆ ಮತ್ತು ಆತ ಎಲ್‌ಎಸಿಯನ್ನು ದಾಟಲು ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸೇನೆಯು ಹೇಳಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ಕಮಾಂಡರ್‌ಗಳು ಪರಸ್ಪರ ಮಾತನಾಡಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿದವು.
ದಕ್ಷಿಣ ದಂಡೆಯಲ್ಲಿನ ಮಂಜುಗಡ್ಡೆಗಳಿಂದ ಕೂಡಿದ ಎತ್ತರದ ಪ್ರದೇಶಗಳಲ್ಲಿ ಉಭಯ ದೇಶಗಳ ನಡುವಿನ ಮೊದಲ ಚಳಿಗಾಲದ ಬಿಕ್ಕಟ್ಟಿನ ನಡುವೆಯೇ ಈ ಬೆಳವಣಿಗೆ ನಡೆದಿದೆ.