ಭಾರತದ 50% ದಷ್ಟು ಸೈನಿಕರು ತೀವ್ರ ಒತ್ತಡದಲ್ಲಿದ್ದಾರೆ: ಸಮೀಕ್ಷಾ ವರದಿ
ಹೊಸದಿಲ್ಲಿ,ಜ.09: ಭಾರತೀಯ ಸೇನೆಯ 13 ಲಕ್ಷ ಸೈನಿಕರ ಪೈಕಿ ಅರ್ಧದಷ್ಟು ಮಂದಿ "ತೀವ್ರ ಒತ್ತಡದಲ್ಲಿರುವಂತೆ ಕಾಣಿಸುತ್ತದೆ," ಹಾಗೂ ಗಡಿಗಳಲ್ಲಿ ವೈರಿ ದೇಶದ ಕೃತ್ಯ ಅಥವಾ ಉಗ್ರವಾದಿಗಳ ಜತೆಗಿನ ಹೋರಾಟದಲ್ಲಿ ಮಡಿದ ಸೈನಿಕರಿಗಿಂತ ಹೆಚ್ಚಿನ ಸಂಖ್ಯೆಯ ಸೈನಿಕರು ಪ್ರತಿ ವರ್ಷ ಆತ್ಮಹತ್ಯೆ ಮತ್ತಿತರ ಅಹಿತಕರ ಘಟನೆಗಳಿಂದ ಸಾವನ್ನಪ್ಪಿದ್ದಾರೆ ಎಂದು ಯುನೈಟೆಡ್ ಸರ್ವಿಸಸ್ ಇನ್‍ಸ್ಟಿಟ್ಯೂಶನ್ ಆಫ್ ಇಂಡಿಯಾ ಎಂಬ ಸಂಸ್ಥೆಗಾಗಿ ಸೇವೆಯಲ್ಲಿರುವ ಕರ್ನಲ್ ಶ್ರೇಣಿಯ ಅಧಿಕಾರಿ ಎ.ಕೆ ಮೋರ್ ನಡೆಸಿದ ಅಧ್ಯಯನ ಕೆಲವೊಂದು ಕುತೂಹಲಕರ ಮಾಹಿತಿ ಹೊರಹಾಕಿದೆ.
ಆದರೆ ಭಾರತೀಯ ಸೇನೆ ಮಾತ್ರ ಈ ಅಧ್ಯಯನದ ವಿವರಗಳನ್ನು ತಿರಸ್ಕರಿಸಿದ್ದು ಇಂತಹ ಒಂದು ತೀರ್ಮಾನಕ್ಕೆ ಬರಲು ಈ ಸಮೀಕ್ಷೆಯಲ್ಲಿ ಪಾಲ್ಗೊಂಡವರ ಸಂಖ್ಯೆ ಬಹಳಷ್ಟು ಸಣ್ಣದಾಗಿತ್ತು ಎಂದು ಹೇಳಿದೆ.
"ಈ ಅಧ್ಯಯನವನ್ನು ಒಬ್ಬ ವ್ಯಕ್ತಿ ಸುಮಾರು 400 ಸೈನಿಕರ ಭಾಗವಹಿಸುವಿಕೆಯಿಂದ ನಡೆಸಿದ್ದರು. ಇದನ್ನು ಇಡೀ ಸೇನೆಗೆ ಅನ್ವಯಿಸುವುದು ತರ್ಕಬದ್ಧವಾಗದು," ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆದರೆ ವಾಸ್ತವವೆಂದರೆ ಪ್ರತಿ ವರ್ಷ ಸುಮಾರು 100 ಸೈನಿಕರು ಆತ್ಮಹತ್ಯೆ ಮಾಡುತ್ತಾರೆ. 2010ರಿಂದೀಚೆಗೆ 950ಕ್ಕೂ ಹೆಚ್ಚು ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅಂಕಿ ಅಂಶಗಳು ತಿಳಿಸುತ್ತವೆ.
ಜೂನಿಯರ್ ಕಮಿಷನ್ಡ್ ಅಧಿಕಾರಿಗಳು ಹಾಗೂ ಜವಾನರಿಗಿಂತ ಅಧಿಕಾರಿಗಳು ಹೆಚ್ಚು ಒತ್ತಡ ಅನುಭವಿಸುತ್ತಾರೆಂದೂ ವರದಿ ಹೇಳಿದೆ.