ʼಲವ್ ಜಿಹಾದ್ʼ ಪ್ರಕರಣದ ಆರೋಪಿಯ ಆಸ್ತಿಯನ್ನು ಮುಟ್ಟುಗೋಲು ಹಾಕಲಿರುವ ಉತ್ತರಪ್ರದೇಶ ಪೊಲೀಸರು
ಲಕ್ನೋ,ಜ.09: ಉತ್ತರ ಪ್ರದೇಶ ಸರಕಾರದ ಬಲವಂತದ ಮತಾಂತರ ತಡೆ ನಿಷೇಧ ಕಾನೂನಿನ್ವಯ ಪ್ರಕರಣ ಎದುರಿಸುತ್ತಿರುವ ಹಾಗೂ ಕಳೆದ ವರ್ಷದ ಡಿಸೆಂಬರ್ ತಿಂಗಳಿನಿಂದ ತಲೆಮರೆಸಿಕೊಂಡಿರುವ ಸೀತಾಪುರ ಜಿಲ್ಲೆಯ ತಂಬೋರ್ ಎಂಬಲ್ಲಿನ ನಿವಾಸಿಯೊಬ್ಬನ ಆಸ್ತಿಯನ್ನು ಪೊಲೀಸರು ಮುಟ್ಟುಗೋಲು ಹಾಕಲಿದ್ದಾರೆ ಎಂದು ತಿಳಿದು ಬಂದಿದೆ.
ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆಂದು ಘೋಷಿಸಲ್ಪಟ್ಟರೆ ಆತನ ಆಸ್ತಿ ಮುತಟುಗೋಲು ಹಾಕುವ ಅಧಿಕಾರ ನೀಡುವ ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 83 ಅನ್ವಯ ಕ್ರಮ ಕೈಗೊಳ್ಳಲು ಪೊಲೀಸರು ನ್ಯಾಯಾಲಯದ ಅನುಮತಿಯನ್ನೂ ಪಡೆದುಕೊಂಡಿದ್ದಾರೆ.
ಈ ನಿರ್ದಿಷ್ಟ ಪ್ರಕರಣದಲ್ಲಿ 22 ವರ್ಷದ ಝುಬ್ರೈಲ್ ಆರೋಪಿಯಾಗಿದ್ದಾನೆ. ಆತ ನೀತು ಎಂಬ 19 ವರ್ಷದ ಹಿಂದು ಯುವತಿಯೊಂದಿಗೆ ನವೆಂಬರ್ 26ರಂದು ಪರಾರಿಯಾಗಿದ್ದ ಎಂದು ಆರೋಪಿಸಲಾಗಿತ್ತು. ಆತ ನಂತರ ಆ ಯುವತಿಯನ್ನು ವಿವಾಹವಾಗಿ ಆಕೆಯನ್ನು ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ್ದಾನೆಂದು ಆರೋಪಿಸಲಾಗಿದೆ.
ಇಂದು ಉಪವಿಭಾಗೀಯ ಮ್ಯಾಜಿಸ್ಟೇಟ್ ಸಮ್ಮುಖದಲ್ಲಿ ಆತನ ಮನೆ ಮತ್ತು ಜಮೀನನ್ನು ಪೊಲೀಸರು ಮುಟ್ಟುಗೋಲು ಹಾಕಲಿದ್ದಾರೆ. ಆತನ ಒಡೆತನದ ವ್ಯಾನ್ ಒಂದನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದಾರೆ.