ಮಹಿಳಾ ಸಿಬ್ಬಂದಿಯೇ ಇರುವ ಸ್ಯಾನ್‌ಫ್ರಾನ್ಸಿಸ್ಕೊ- ಬೆಂಗಳೂರು ವಿಮಾನ ಹಾರಾಟ ಆರಂಭ: ಹರ್ದೀಪ್ ಪುರಿ

Update: 2021-01-09 15:06 GMT

ಹೊಸದಿಲ್ಲಿ, ಜ. 9: ಕಾಕ್‌ಪಿಟ್‌ನಲ್ಲಿ ಮಹಿಳಾ ಸಿಬ್ಬಂದಿಯೇ ಇರುವ ಮೊದಲ ವಿಮಾನ ಸ್ಯಾನ್ ಫ್ರಾನ್ಸಿಸ್ಕೊ ಹಾಗೂ ಬೆಂಗಳೂರು ನಡುವೆ ಶನಿವಾರ ಉದ್ಘಾಟನಾ ಹಾರಾಟ ನಡೆಸಿದೆ ಎಂದು ನಾಗರಿಕ ವಿಮಾನ ಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಏರ್ ಇಂಡಿಯಾದ ಈ ವಿಮಾನ ಶನಿವಾರ ಉತ್ತರ ಧ್ರುವದ ಮೇಲೆ ಹಾರಾಟ ನಡೆಸಿದ್ದು, ಅಟ್ಲಾಂಟಿಕ್ ಮಾರ್ಗದ ಮೂಲಕ ಬೆಂಗಳೂರು ತಲುಪಲಿದೆ ಎಂದು ಏರ್ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ. ‘‘ಕಾಕ್‌ಪಿಟ್‌ನಲ್ಲಿರುವ ಮಹಿಳಾ ಸಿಬ್ಬಂದಿಯಾದ ಕ್ಯಾಪ್ಟನ್ ಝೋಯಾ ಅಗರ್ವಾಲ್, ಕ್ಯಾಪ್ಟನ್ ಪಾಪಗರಿ ತನ್ಮೈ, ಕ್ಯಾಪ್ಟನ್ ಆಕಾಂಕ್ಷಾ ಸೋನಾವಾರೆ ಹಾಗೂ ಕ್ಯಾಪ್ಟನ್ ಶಿವಾನಿ ಮನ್ಹಾಸ್ ಬೆಂಗಳೂರು ಹಾಗೂ ಸ್ಯಾನ್‌ಫ್ರಾನ್ಸಿಸ್ಕೊ ನಡುವಿನ ಈ ಚಾರಿತ್ರಿಕ ವಿಮಾನದ ಉದ್ಘಾಟನಾ ಹಾರಾಟದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ’’ ಎಂದು ಪುರಿ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೊ ಹಾಗೂ ಬೆಂಗಳೂರಿನ ನಡುವಿನ ವೈಮಾನಿಕ ಅಂತರ ಜಗತ್ತಿನಲ್ಲೇ ಅತಿ ದೀರ್ಘವಾದುದು. ಏರ್ ಇಂಡಿಯಾದ ಮಹಿಳಾ ತಂಡ ಪ್ರಪಂಚದಾದ್ಯಂತ ಎತ್ತರಕ್ಕೆ ಹಾರಲಿದೆ ಎಂದು ಪುರಿ ತಿಳಿಸಿದ್ದಾರೆ. ಈ ಉದ್ಘಾಟನಾ ವಿಮಾನ ಎ176 ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊದಿಂದ ಶನಿವಾರ ರಾತ್ರಿ 8.30 (ಸ್ಥಳೀಯ ಸಮಯ) ಕ್ಕೆ ನಿರ್ಗಮಿಸಿದೆ ಹಾಗೂ ಸೋಮವಾರ ಮುಂಜಾನೆ 3.45ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News