×
Ad

ಭಾರತದಲ್ಲಿ ರೈತರ ಪ್ರತಿಭಟನೆ ಕುರಿತು 100ಕ್ಕೂ ಅಧಿಕ ಬ್ರಿಟಿಷ್ ಸಂಸದರಿಂದ ಜಾನ್ಸನ್‌ಗೆ ಪತ್ರ

Update: 2021-01-09 21:07 IST

ಚಂಡಿಗಡ,ಜ.9: ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಕುರಿತು ಸೃಷ್ಟಿಯಾಗಿರುವ ಕಳವಳಗಳನ್ನು ನಿವಾರಿಸಲು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡುವಂತೆ 100ಕ್ಕೂ ಅಧಿಕ ಬ್ರಿಟಿಷ್ ಸಂಸದರು ಪಕ್ಷಭೇದವನ್ನು ಮರೆತು ತಮ್ಮ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಪತ್ರವನ್ನು ಬರೆದು ಆಗ್ರಹಿಸಿದ್ದಾರೆ.

ಸಂಸದರ ಪರವಾಗಿ ಸ್ಲೋ ಸಂಸದ ತನ್ ದೇಶಿ ಅವರು ಜ.5ರಂದು ಈ ಪತ್ರವನ್ನು ಬರೆದಿದ್ದಾರೆ.

ಹಲವಾರು ಬ್ರಿಟಿಷ್ ಪ್ರಜೆಗಳು,ವಿಶೇಷವಾಗಿ ಪಂಜಾಬ್ ಮತ್ತು ಭಾರತದ ಇತರ ಭಾಗಗಳಿಂದ ಇಲ್ಲಿ ನೆಲೆಯೂರಿರುವ ಅನಿವಾಸಿ ಭಾರತೀಯರು ಶಾಂತಿಯುತ ಪ್ರತಿಭಟನೆಯನ್ನು ನಡೆಸುತ್ತಿರುವ ಸಾವಿರಾರು ರೈತರ ವಿರುದ್ಧ ಜಲಫಿರಂಗಿ, ಅಶ್ರುವಾಯು ಮತ್ತು ಕ್ರೂರ ಪೊಲೀಸ್ ಬಲದ ಬಳಕೆಯಾಗುತ್ತಿರುವ ವೀಡಿಯೊ ತುಣುಕುಗಳನ್ನು ಕಂಡು ಹೌಹಾರಿದ್ದಾರೆ. ಇದು ಅನಿವಾಸಿ ಭಾರತೀಯರಿಗೆ ನೋವನ್ನುಂಟು ಮಾಡಿದ್ದು,ಸಾವಿರಾರು ಜನರು ವಿಶೇಷವಾಗಿ ಭಾರತದಲ್ಲಿ ಭೂಮಿ ಅಥವಾ ಸಂಬಂಧಗಳನ್ನು ಹೊಂದಿರುವ ಪಂಜಾಬಿ ಮತ್ತು ಸಿಖ್ ಹಿನ್ನೆಲೆಯ ಜನರು ಬ್ರಿಟನ್‌ನಾದ್ಯಂತ ಪಟ್ಟಣಗಳು ಮತ್ತು ನಗರಗಳು ಸೇರಿದಂತೆ ಜಾಗತಿಕ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ನಿಮ್ಮ ಜನವರಿಯ ಭಾರತ ಭೇಟಿ ರದ್ದಾಗಿದೆಯೆಂದು ನಾವು ಭಾವಿಸಿದ್ದೇವೆ,ಆದರೆ ನೀವು ಶೀಘ್ರವೇ ಮೋದಿಯವರನ್ನು ಭೇಟಿಯಾಗಲಿದ್ದೀರಿ ಎಂಬ ಮಾಹಿತಿ ಲಭಿಸಿದೆ. ಸಮಸ್ಯೆಯ ತುರ್ತು ಸ್ವರೂಪವನ್ನು ಗಮನಿಸಿ ಪ್ರಸಕ್ತ ಬಿಕ್ಕಟ್ಟನ್ನು ಬಗೆಹರಿಸಲು ತ್ವರಿತ ನಿರ್ಣಯವೊಂದನ್ನು ಕೈಗೊಳ್ಳಬೇಕು ಮತ್ತು ಶಾಂತಿಯುತ ಪ್ರತಿಭಟನೆಯ ಜನತೆಯ ಹಕ್ಕುಗಳನ್ನು ರಕ್ಷಿಸಬೇಕು ಎಂಬ ನಮ್ಮ ಹೃದಯಾಂತರಾಳದ ಆಶಯವನ್ನು ದಯವಿಟ್ಟು ಮೋದಿಯವರಿಗೆ ತಿಳಿಸಿ ’ಎಂದು ಈ ಸಂಸದರು ಪತ್ರದಲ್ಲಿ ಜಾನ್ಸನ್‌ರನ್ನು ಕೋರಿದ್ದಾರೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಈ ವಿಷಯವನ್ನು ಕೈಗೆತ್ತಿಕೊಳ್ಳುವಂತೆ ಕೋರಿ ವಿದೇಶಾಂಗ ಕಾರ್ಯದರ್ಶಿ ಡಾಮಿನಿಕ್ ರಾಬ್ ಅವರಿಗೂ ಸಂಸದರು ಪತ್ರವನ್ನು ಬರೆದಿದ್ದಾರೆ ಎಂದೂ ಜಾನ್ಸನ್‌ಗೆ ಮಾಹಿತಿ ನೀಡಲಾಗಿದೆ. ತನಗೆ ಪತ್ರ ಬಂದಿರುವುದನ್ನು ದೃಢಪಡಿಸಿರುವ ರಾಬ್,ಕಳೆದ ಡಿಸೆಂಬರ್‌ನಲ್ಲಿ ಮೋದಿಯವರನ್ನು ತಾನು ಭೇಟಿಯಾಗಿದ್ದ ಸಂದರ್ಭ ರೈತರ ಪ್ರತಿಭಟನೆಯ ವಿಷಯವನ್ನು ಪ್ರಸ್ತಾಪಿಸಿರಲಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News