×
Ad

ಬದೌನ್: ಅತ್ಯಾಚಾರ, ಹತ್ಯೆ ಪ್ರಕರಣ; ಎಫ್‌ಐಆರ್ ದಾಖಲಿಸದ ಎಸ್‌ಎಚ್‌ಒ, ಹೊರಠಾಣೆ ಉಸ್ತುವಾರಿ ವಿರುದ್ಧ ಪ್ರಕರಣ ದಾಖಲು

Update: 2021-01-09 22:05 IST

ಹೊಸದಿಲ್ಲಿ, ಜ. 9: ಕಳೆದ ರವಿವಾರ ಅತ್ಯಾಚಾರ ಹಾಗೂ ಹತ್ಯೆಗೀಡಾದ 50 ವರ್ಷದ ಮಹಿಳೆಯ ಕುಟುಂಬ ಸೋಮವಾರ ಪೊಲೀಸರನ್ನು ಸಂಪರ್ಕಿಸಿದ ಸಂದರ್ಭ ಕ್ರಮ ಕೈಗೊಳ್ಳದ ಉಘೈಟಿ ಪೊಲೀಸ್ ಠಾಣೆಯ ಅಧಿಕಾರಿ (ಎಸ್‌ಎಚ್‌ಒ) ರಾಘವೇಂದ್ರ ಪ್ರತಾಪ್ ಸಿಂಗ್ ಹಾಗೂ ಪೊಲೀಸ್ ಹೊರಠಾಣೆಯ ಉಸ್ತುವಾರಿ ಅಮರ್‌ಜೀತ್ ಸಿಂಗ್ ವಿರುದ್ಧ ಬದೌನ್ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ.

‘‘ದೂರುದಾರರರ ಎಫ್‌ಐಆರ್ ದಾಖಲಿಸುವ ಹಕ್ಕನ್ನು ನಿರಾಕರಿಸಿದ ಆರೋಪದಲ್ಲಿ ಅವರಿಬ್ಬರ ವಿರುದ್ಧ 166 ಎ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯ ಕುಟುಂಬ ಇಬ್ಬರನ್ನೂ ಸಂಪರ್ಕಿಸಿದೆ. ಆದರೆ, ಅವರು ಏನನ್ನೂ ಮಾಡಿಲ್ಲ. ಇಂತಹ ಅಪರಾಧಗಳು ಘಟಿಸಿದ ಬಳಿಕ ಅಗತ್ಯವಿರುವ ಯಾವುದೇ ಔಪಚಾರಿಕತೆಯನ್ನು ಅವರು ಕೈಗೊಂಡಿಲ್ಲ’’ ಎಂದು ಬರೇಲಿ ಐಜಿ ರಾಜೇಶ್ ಕುಮಾರ್ ಪಾಂಡೆ ಹೇಳಿದ್ದಾರೆ. 50 ವರ್ಷದ ಅಂಗನವಾಡಿ ಕಾರ್ಯಕರ್ತೆ ರವಿವಾರ ಮೇವಾಲಿ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ತೆರಳಿದ್ದಾಗ ಅರ್ಚಕ ಸತ್ಯನಾರಾಯಣ ಹಾಗೂ ಆತನ ಇಬ್ಬರು ಅನುಯಾಯಿಗಳಾದ ವೇದ್ರಮ್ ಹಾಗೂ ಜಸ್ಪಾಲ್ ಸಾಮೂಹಿಕ ಅತ್ಯಾಚಾರ ಎಸಗಿದ್ದರು.

 ಎಫ್‌ಐಆರ್ ದಾಖಲಿಸಲು ಮಹಿಳೆಯ ಕುಟುಂಬ ಉಘೈಟಿ ಪೊಲೀಸ್ ಠಾಣೆಗೆ ಆಗಮಿಸಿದಾಗ ಠಾಣಾಧಿಕಾರಿ (ಎಸ್‌ಎಚ್‌ಒ) ರಾಘವೇಂದ್ರ ಪ್ರತಾಪ್ ಸಿಂಗ್ ಯಾವುದೇ ರೀತಿಯ ಗಮನ ಹರಿಸಿಲ್ಲ. ಅಲ್ಲದೆ ‘ಮಹಿಳೆ ಅಪಘಾತದಿಂದ ಮೃತಪಟ್ಟಿದ್ದಾರೆ’ ಎಂದು ಹೇಳುವ ಮೂಲಕ ಅಪರಾಧದ ತೀವ್ರತೆ ಹಾಗೂ ಮಹಿಳೆಯ ಸಾವಿನ ಸನ್ನಿವೇಶದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಲಾಗಿದೆ.

ಅಪರಾಧ ನಡೆದ ಸ್ಥಳಕ್ಕೆ ರಾಘವೇಂದ್ರ ಪ್ರತಾಪ್ ಸಿಂಗ್ ಭೇಟಿ ನೀಡಿಲ್ಲ. ಅಲ್ಲದೆ, ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿಲ್ಲ. ಮಹಿಳೆಯ ಕುಟುಂಬ 112 (ಪೊಲೀಸ್ ಸಹಾಯವಾಣಿ) ಕ್ಕೆ ಕರೆ ಮಾಡಿರುವುದಕ್ಕೆ ಪ್ರತಿಕ್ರಿಯೆಯಾಗಿ ಅವರು ಸೋಮವಾರ 3 ಗಂಟೆಗೆ ಕಿಯೋಲಿ ಗ್ರಾಮಕ್ಕೆ ತೆರಳಿದ ಬಳಿಕ ಪೊಲೀಸರು ಮಹಿಳೆಯ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಕುಟುಂಬದ ದೂರಿಗೆ ಹೊರ ಠಾಣೆಯ ಉಸ್ತುವಾರಿ ಅಮರ್‌ಜೀತ್ ಸಿಂಗ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ ಹಾಗೂ ಪ್ರಕರಣದ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಲಾಗಿದೆ. ಮಹಿಳೆಯ ಗುಪ್ತಾಂಗಗಳಿಗೆ ಗಂಭೀರ ಘಾಸಿಯಾಗಿದೆ ಹಾಗೂ ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ಬಹಿರಂಗಗೊಳಿಸಿದ ಬಳಿಕ ಆರೋಪಿಗಳ ವಿರುದ್ಧ ಮಂಗಳವಾರ ಎಫ್‌ಐಆರ್ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News