×
Ad

ಸ್ವಯಂಸೇವಕನ ಸಾವಿಗೂ ಕೋವ್ಯಾಕ್ಸಿನ್‌ಗೂ ಸಂಬಂಧವಿಲ್ಲ: ಭಾರತ್ ಬಯೋಟೆಕ್

Update: 2021-01-09 23:13 IST

ಹೊಸದಿಲ್ಲಿ,ಜ.9: ಭಾರತ ಬಯೋಟೆಕ್ ಅಭಿವೃದ್ಧಿಗೊಳಿಸಿರುವ ಕೋವಿಡ್ -19 ಲಸಿಕೆ ಕೋವ್ಯಾಕ್ಸಿನ್‌ನ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಸಂದರ್ಭದಲ್ಲಿ ಒಂದು ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದ ಭೋಪಾಲದ 42ರ ಹರೆಯದ ಸ್ವಯಂಸೇವಕನ ಸಾವು ಈ ಲಸಿಕೆಯ ತುರ್ತು ಬಳಕೆಗೆ ಕೇಂದ್ರದ ಅನುಮತಿಯ ಕುರಿತು ಇನ್ನಷ್ಟು ವಿವಾದವನ್ನು ಸೃಷ್ಟಿಸಿದೆ. ತನ್ಮಧ್ಯೆ ಸ್ವಯಂಸೇವಕನ ಸಾವಿಗೆ ಕೋವ್ಯಾಕ್ಸಿನ್ ಕಾರಣವಾಗಿತ್ತು ಎನ್ನುವುದನ್ನು ಬಯೋಟೆಕ್ ಶನಿವಾರ ನಿರಾಕರಿಸಿದೆ. ಲಸಿಕೆಗೂ ಸ್ವಯಂಸೇವಕನ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಅದು ತಿಳಿಸಿದೆ.

ಭೋಪಾಲದ ಗಾಂಧಿ ಮೆಡಿಕಲ್ ಕಾಲೇಜಿನ ಮರಣೋತ್ತರ ಪರೀಕ್ಷಾ ವರದಿಯಂತೆ ವ್ಯಕ್ತಿಯ ಸಾವಿಗೆ ಶಂಕಿತ ವಿಷಪ್ರಾಶನದ ಪರಿಣಾಮವಾಗಿ ಹೃದಯಾಘಾತ ಸಂಭಾವ್ಯ ಕಾರಣವಾಗಿದೆ ಮತ್ತು ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಭಾರತ ಬಯೋಟೆಕ್ ಹೇಳಿಕೆಯಲ್ಲಿ ತಿಳಿಸಿದೆ.

ಸ್ವಯಂಸೇವಕ ಲಸಿಕೆಯ ಡೋಸ್‌ನ್ನು ಸ್ವೀಕರಿಸಿದ ಒಂಭತ್ತು ದಿನಗಳ ಬಳಿಕ,ಡಿ.21ರಂದು ತೀರಿಕೊಂಡಿದ್ದು,ಮೃತ ವ್ಯಕ್ತಿಯ ಪುತ್ರ ಪೀಪಲ್ಸ್ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರೀಸರ್ಚ್ ಸೆಂಟರ್‌ಗೆ ಈ ಬಗ್ಗೆ ವರದಿ ಮಾಡಿದ್ದ. ಪ್ರಾಥಮಿಕ ಪುನರ್‌ಪರಿಶೀಲನೆಗಳು ವ್ಯಕ್ತಿಯ ಸಾವಿಗೆ ಲಸಿಕೆಯ ಡೋಸ್ ಕಾರಣವಲ್ಲ ಎನ್ನುವುದನ್ನು ಸೂಚಿಸಿವೆ ಎಂದೂ ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News