ಭಾರತದಲ್ಲಿ ರೂಪಾಂತರಿತ ಕೋವಿಡ್-19 ಪ್ರಕರಣಗಳ ಸಂಖ್ಯೆ 90ಕ್ಕೇರಿಕೆ,ಎಲ್ಲ ರೋಗಿಗಳು ಐಸೊಲೇಷನ್‌ನಲ್ಲಿ

Update: 2021-01-10 14:45 GMT

ಹೊಸದಿಲ್ಲಿ,ಜ.10: ದೇಶದಲ್ಲಿ ರೂಪಾಂತರಿತ ಕೋವಿಡ್-19 ಪ್ರಕರಣಗಳ ಒಟ್ಟು ಸಂಖ್ಯೆ 90ಕ್ಕೇರಿದೆ ಎಂದು ಕೇಂದ್ರವು ಶನಿವಾರ ತಿಳಿಸಿದೆ. ಶುಕ್ರವಾರವಷ್ಟೇ ಭಾರತ-ಬ್ರಿಟನ್ ನಡುವೆ ವಿಮಾನಯಾನ ಪುನರಾರಂಭಗೊಂಡಿದ್ದು,ಅಂದು ದೇಶದಲ್ಲಿ ರೂಪಾಂತರಿತ ಪ್ರಕರಣಗಳ ಸಂಖ್ಯೆ 82 ಆಗಿತ್ತು. ಶೇ.70ರಷ್ಟು ಹೆಚ್ಚು ಸಾಂಕ್ರಾಮಿಕವಾಗಿರುವ ರೂಪಾಂತರಿತ ವೈರಸ್ ಬ್ರಿಟನ್‌ನಲ್ಲಿ ಮೊದಲು ಪತ್ತೆಯಾಗಿತ್ತು.

ಕೇಂದ್ರದ ನಿರ್ಧಾರದಂತೆ ರೂಪಾಂತರಿತ ಕೋವಿಡ್ ಸೋಂಕಿಗೆ ತುತ್ತಾದವರನ್ನು ಆಯಾ ರಾಜ್ಯ ಸರಕಾರಗಳು ನಿಯೋಜಿತ ಕೋವಿಡ್ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿರಿಸಿವೆ. ಇಂತಹ ರೋಗಿಗಳ ನಿಕಟ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನೂ ಕ್ವಾರಂಟೈನ್ ನಲ್ಲಿರಿಸಲಾಗಿದೆ.

ಹೊಸದಾಗಿ ತಲೆದೋರಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಬ್ರಿಟನ್‌ಗೆ ಸಾಪ್ತಾಹಿಕ ವಿಮಾನಯಾನಗಳ ಸಂಖ್ಯೆಯನ್ನು 60ರಿಂದ 30ಕ್ಕೆ ತಗ್ಗಿಸಿದೆ ಮತ್ತು ಬ್ರಿಟನ್‌ನಿಂದ ಆಗಮಿಸುವ ಎಲ್ಲ ಪ್ರಯಾಣಿಕರನ್ನು ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ತನ್ಮಧ್ಯೆ ಶನಿವಾರ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 18,222 ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು,ಒಟ್ಟು ಪ್ರಕರಣಗಳ ಸಂಖ್ಯೆ 1,04,31,639ಕ್ಕೇರಿದೆ. ಈ ಅವಧಿಯಲ್ಲಿ 228 ಸಾವುಗಳು ದಾಖಲಾಗಿದ್ದು,ಒಟ್ಟು ಸಾವುಗಳ ಸಂಖ್ಯೆ 1,50,798ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News