ವ್ಯಕ್ತಿಯನ್ನು ಅಕ್ರಮವಾಗಿ ಬಂಧಿಸಿ,ಜಾಮೀನಿಗೆ ಲಂಚ ಕೇಳಿದ್ದ ದಿಲ್ಲಿ ಪೊಲೀಸರಿಗೆ ನ್ಯಾಯಾಲಯದ ತರಾಟೆ

Update: 2021-01-10 15:37 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜ.10: ಬೈಕ್ ಕಳವು ಪ್ರಕರಣವೊಂದರಲ್ಲಿ ವ್ಯಕ್ತಿಯನ್ನು ಅಕ್ರಮವಾಗಿ ಬಂಧಿಸಿದ್ದಕ್ಕಾಗಿ ಮತ್ತು ಆತನ ಜಾಮೀನು ಬಿಡುಗಡೆಗೆ ನೆರವಾಗಲು ಸೋದರಿಯಿಂದ ಲಂಚವನ್ನು ಕೇಳಿದ್ದಕ್ಕಾಗಿ ದಿಲ್ಲಿ ಪೊಲೀಸರನ್ನು ತರಾಟೆಗೆತ್ತಿಕೊಂಡಿರುವ ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು,ಲಂಚದ ಆರೋಪದ ಬಗ್ಗೆ ತನಿಖೆ ನಡೆಸಿ ಜ.13ರೊಳಗೆ ತನಗೆ ವರದಿಯನ್ನು ಸಲ್ಲಿಸುವಂತೆ ದ್ವಾರಕಾ ಡಿಸಿಪಿಗೆ ಆದೇಶಿಸಿದೆ.

ಪ್ರಕರಣದಲ್ಲಿ ಆರೋಪಿಯ ಅಕ್ರಮ ಬಂಧನಕ್ಕೆ ಸಂಬಂಧಿಸಿದಂತೆ ಕ್ರಮವನ್ನು ಕೈಗೊಳ್ಳುವಂತೆ ಮತ್ತು ಜ.13ರೊಳಗೆ ಕ್ರಮಪಾಲನಾ ವರದಿಯನ್ನು ಸಲ್ಲಿಸುವಂತೆಯೂ ಡಿಸಿಪಿಗೆ ನಿರ್ದೇಶ ನೀಡಿದ ನ್ಯಾ.ಸೋನು ಅಗ್ನಿಹೋತ್ರಿ ಅವರು ಆರೋಪಿ ರವಿ ನಂದಾನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದರು.

ಆರೋಪಿಯ ಸೋದರಿ ಕೆಂಪು ರಿಮ್‌ಗಳಿರುವ ಹಳದಿ ಬಣ್ಣದ ಬೈಕ್‌ನ್ನು ಹೊಂದಿದ್ದು,ಇದು ಬೈಕ್ ಕಳವು ದೂರಿನಲ್ಲಿ ತಿಳಿಸಲಾಗಿದ್ದ ವರ್ಣನೆಗೆ ತಾಳೆಯಾಗುತ್ತಿತ್ತು ಮತ್ತು ಇದೊಂದೇ ಅಂಶದ ಆಧಾರದಲ್ಲಿ ರವಿ ನಂದಾನನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿ ನ್ಯಾಯಾಲಯಕ್ಕೆ ತಿಳಿಸಿದ್ದರು.

ದಿಲ್ಲಿಯಲ್ಲಿ ಬೇರೆ ಯಾವುದೇ ಕೆಂಪು ರಿಮ್‌ಗಳ ಹಳದಿ ಬೈಕ್‌ಗಳಿಲ್ಲವೇ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದ ತನಿಖಾಧಿಕಾರಿ,ಇದ್ದಿರಬಹುದು ಎಂದು ತಿಳಿಸಿದರು.

ಬೈಕ್ ಕಳವು ಮಾಡಿದ್ದ ವ್ಯಕ್ತಿ ಹೆಲ್ಮೆಟ್ ಧರಿಸಿದ್ದರಿಂದ ಗುರುತು ಹಿಡಿಯಲು ದೂರುದಾರನಿಗೆ ಸಾಧ್ಯವಿಲ್ಲ,ಹೀಗಾಗಿ ರವಿ ನಂದಾನ ಗುರುತು ಪತ್ತೆ ಪರೇಡ್ ನಡೆಸಿಲ್ಲ,ಕಳವಾದ ಸೊತ್ತನ್ನೂ ವಶಪಡಿಸಿಕೊಂಡಿಲ್ಲ ಎಂದೂ ತನಿಖಾಧಿಕಾರಿ ಹೇಳಿದರು.

ತನಿಖಾಧಿಕಾರಿಯ ಹೇಳಿಕೆಗಳು ಅಚ್ಚರಿದಾಯಕವಾಗಿವೆ. ಹಾಲಿ ಪ್ರಕರಣವನ್ನು ಬಗೆಹರಿಸುವ ಉದ್ದೇಶದಿಂದ ರವಿ ನಂದಾನನ್ನು ಅಕ್ರಮವಾಗಿ ವಶಕ್ಕೆ ತೆಗೆದುಕೊಂಡಿರುವಂತೆ ಕಂಡು ಬರುತ್ತಿದೆ ಎಂದು ನ್ಯಾಯಾಲಯವು ಪ್ರತಿಕ್ರಿಯಿಸಿತು. ರವಿ ನಂದಾಗೆ ಜಾಮೀನು ಕೊಡಿಸಲು ನೆರವಾಗಲು ಎಎಸ್‌ಐ ಓರ್ವರು 50,000 ರೂ.ಗಳ ಲಂಚವನ್ನು ಕೇಳಿದ್ದರು ಎಂದು ವಿಚಾರಣೆ ಸಂದರ್ಭ ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದ್ದು, ಅದನ್ನು ಆಲಿಸಿದ ನ್ಯಾಯಾಧೀಶರು,ಲಂಚವನ್ನು ಕೇಳಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News