ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು

Update: 2021-01-10 16:32 GMT

ಲುಧಿಯಾನ, ಜ. 10: ಟಿ.ವಿ. ಚರ್ಚಾ ಕಾಯಕ್ರಮದಲ್ಲಿ ಕೃಷಿ ಕಾಯ್ದೆಗಳನ್ನು ಗುರು ಗೋವಿಂದ್ ಅವರ ಝಫರ್‌ನಾಮದೊಂದಿಗೆ ಹೋಲಿಸಿದ ಬಳಿಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಪಂಜಾಬ್‌ನ ಬಿಜೆಪಿ ನಾಯಕರೋರ್ವರ ವಿರುದ್ಧ ಶನಿವಾರ ಪ್ರಕರಣ ದಾಖಲಿಸಲಾಗಿದೆ.

ಬಥಿಂಡಾ ಮೂಲದವರಾದ ಹಾಗೂ ಪಂಜಾಬ್ ಬಿಜೆಪಿಯ ಕಾರ್ಯದರ್ಶಿಯಾಗಿರುವ ಸುಖಪಾಲ್ ಸಿಂಗ್ ಸರನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಟಿ.ವಿ. ಚರ್ಚಾ ಕಾರ್ಯಕ್ರಮವನ್ನು ಕೆಲವು ದಿನಗಳ ಹಿಂದೆ ನಡೆಸಲಾಗಿತ್ತು. ಪಂಜಾಬ್ ಚಾನೆಲ್‌ ನಲ್ಲಿ ಪ್ರಸಾರವಾದ ಚರ್ಚಾ ಕಾರ್ಯಕ್ರಮದ 1 ನಿಮಿಷದ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಕೃಷಿ ಕಾಯ್ದೆಯನ್ನು ಧೈರ್ಯವಂತ ಪ್ರಧಾನಿ ಅವರಿಂದ ಮಾತ್ರ ಜಾರಿಗೆ ತರಲು ಸಾಧ್ಯವಾಯಿತು ಎಂದು ಅವರು ಹೇಳಿದ್ದರು.

‘‘ಸರ್ವಾಧಿಕಾರಿ ಔರಂಗಜೇಬ್‌ನಿಗಾಗಿ ಗುರು ಗೋವಿಂದ್ ಸಿಂಗ್ ಝಫರ್‌ನಾಮವನ್ನು ಬರೆದ ರೀತಿಯಲ್ಲಿ, ಇದು ಭಾರತದ ಇತರ ರಾಜಕೀಯ ಪಕ್ಷಗಳಿಗೆ ಝಫರ್‌ನಾಮ’’ ಎಂದು ಸರನ್ ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿ ಬಂದಿದೆ. ಅನಂತರ ಶನಿವಾರ ಸರನ್, ‘‘ನಾನು ಭಾವನೆಗಳಿಗೆ ಧಕ್ಕೆಯಾಗುವ ಯಾವುದೇ ವಿಚಾರವನ್ನು ಹೇಳಿಲ್ಲ. ಒಂದು ವೇಳೆ ಯಾರಿಗಾದರೂ ನೋವುಂಟಾಗಿದ್ದರೆ, ಕ್ಷಮೆ ಕೋರುತ್ತೇನೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News