ಥಾಣೆ: ದೇಶದ ಪ್ರಪ್ರಥಮ ಋತುಸ್ರಾವ ಕೊಠಡಿ ಆರಂಭ

Update: 2021-01-10 17:07 GMT
ಫೋಟೊ ಕೃಪೆ: The Financial Express

ಮುಂಬೈ, ಜ.10: ಮಹಿಳೆಯರು ಎದುರಿಸುತ್ತಿರುವ ಋತುಸ್ರಾವ(ಮುಟ್ಟಿನ) ಸಮಸ್ಯೆಯ ಬಗ್ಗೆ ಗಮನ ಹರಿಸಿರುವ ಥಾಣೆ ನಗರಪಾಲಿಕೆ ಅಧಿಕಾರಿಗಳು, ನಗರದಲ್ಲಿ ವಿಶಿಷ್ಟವಾದ ‘ಋತುಸ್ರಾವ ಕೊಠಡಿ’ಯನ್ನು ರಚಿಸಿದ್ದಾರೆ. ದೇಶದಲ್ಲೇ ಪ್ರಪ್ರಥಮ ಬಾರಿಗೆ ಇಂತಹ ವ್ಯವಸ್ಥೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶಾಂತಿನಗರ ಪ್ರದೇಶದ ಕೊಳೆಗೇರಿಯ ಬಳಿ ಇರುವ ಸಾರ್ವಜನಿಕ ಶೌಚಾಲಯದಲ್ಲಿ ಈ ವಿಶಿಷ್ಟ ಕೊಠಡಿ ನಿರ್ಮಿಸಲಾಗಿದೆ. ಕೊಳೆಗೇರಿ ವಾಸಿ ಮಹಿಳೆಯರು ಎದುರಿಸುತ್ತಿರುವ ಋತುಸ್ರಾವ ಸಮಸ್ಯೆ ಪರಿಹರಿಸಲು ಮತ್ತವರಿಗೆ ಆರೋಗ್ಯಕರ ಸ್ಯಾನಿಟರಿ ಪ್ಯಾಡ್‌ಗಳನ್ನು ಇಲ್ಲಿ ಒದಗಿಸಲಾಗುವುದು. ದೇಶದಲ್ಲೇ ಸಾರ್ವಜನಿಕ ಶೌಚಾಲಯದಲ್ಲಿ ಪ್ರಪ್ರಥಮ ಉಪಕ್ರಮ ಎಂದೆನಿಸಿರುವ ಈ ವ್ಯವಸ್ಥೆಯನ್ನು ಥಾಣೆ ನಗರಪಾಲಿಕೆ ಮತ್ತು ಸರಕಾರೇತರ ಸಂಸ್ಥೆಯ ಜಂಟಿ ಸಹಯೋಗದಲ್ಲಿ ಆರಂಭಿಸಲಾಗಿದೆ.

ಶೌಚಾಲಯ, ಜೆಟ್ ಸ್ಪ್ರೇ ವ್ಯವಸ್ಥೆ, ಟಾಯ್ಲೆಟ್ ರೋಲ್ ಹೋಲ್ಡರ್, ನೀರಿನ ವ್ಯವಸ್ಥೆ, ಕಸದ ಡಬ್ಬಿಯನ್ನು ಹೊಂದಿರುವ ಈ ಕೊಠಡಿಯ ಗೋಡೆಯಲ್ಲಿ ಮುಟ್ಟಿನ ಅವಧಿಯಲ್ಲಿ ನೈರ್ಮಲ್ಯದ ಬಗ್ಗೆ ಹೆಚ್ಚಿನ ಗಮನ ನೀಡುವ ಬಗ್ಗೆ ಜಾಗೃತಿ ಮೂಡಿಸುವ ಸಂದೇಶಗಳನ್ನು ಬರೆಯಲಾಗಿದೆ. 45,000 ರೂ. ವೆಚ್ಚದ ಈ ವ್ಯವಸ್ಥೆಯನ್ನು ನಗರದ 120 ಸಮುದಾಯ ಶೌಚಾಲಯದಲ್ಲಿ ಆರಂಭಿಸಲಾಗುವುದು. ಅತ್ಯಂತ ಸಣ್ಣ, ಇಕ್ಕಟ್ಟಾದ ಮನೆಯಲ್ಲಿ ವಾಸಿಸುತ್ತಿರುವ ಮಹಿಳೆಯರು ಮುಟ್ಟಿನ ಸಂದರ್ಭ ಸ್ಯಾನಿಟರಿ ಪ್ಯಾಡ್ ಬದಲಾಯಿಸಲು ಸಮಸ್ಯೆ ಎದುರಿಸುತ್ತಾರೆ. ಅಂತವರಿಗೆ ಈ ವ್ಯವಸ್ಥೆ ವರದಾನವಾಗಲಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News