ಆಸ್ಟ್ರೇಲಿಯದಲ್ಲಿ ಗರಿಷ್ಠ ಟೆಸ್ಟ್ ರನ್ ಗಳಿಸಿದ ಏಷ್ಯದ ವಿಕೆಟ್‍ ಕೀಪರ್ ರಿಷಭ್ ಪಂತ್

Update: 2021-01-11 11:08 GMT

ಸಿಡ್ನಿ: ಭಾರತದ 23ರ ವಯಸ್ಸಿನ ರಿಷಭ್ ಪಂತ್ ಆಸ್ಟ್ರೇಲಿಯ ವಿರುದ್ಧ ಮೂರನೇ ಟೆಸ್ಟ್ ನ ಎರಡನೇ ಇನಿಂಗ್ಸ್ ನಲ್ಲಿ ಕೇವಲ ಮೂರು ರನ್‍ನಿಂದ ಮೂರನೇ ಬಾರಿ ಶತಕ ಗಳಿಸುವುದರಿಂದ ವಂಚಿತರಾದರು. ಆದಾಗ್ಯೂ ಆಸ್ಟ್ರೇಲಿಯ ಪ್ರವಾಸದಲ್ಲಿ ಕೆಲವು ದಾಖಲೆಗಳನ್ನು ನಿರ್ಮಿಸಿರುವ ಪಂತ್ ಮುಂದಿನ ಕ್ರಿಕೆಟ್ ಪ್ರವಾಸದಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡರು.

ಸಿಡ್ನಿ ಟೆಸ್ಟ್ ಮೊದಲ ಇನಿಂಗ್ಸ್ ನ 36 ರನ್ ಗಳಿಸಿದ್ದ ಪಂತ್ ಆಸ್ಟ್ರೇಲಿಯದಲ್ಲಿ ಒಟ್ಟು 400ಕ್ಕೂ ಅಧಿಕ ಟೆಸ್ಟ್ ರನ್ ಗಳಿಸಿದ ಸಾಧನೆ ಮಾಡಿದ್ದರು. ಸೋಮವಾರ 97 ರನ್ ಕಲೆಹಾಕಿದ ಪಂತ್ ಆಸ್ಟ್ರೇಲಿಯದಲ್ಲಿ ಗರಿಷ್ಠ ರನ್ ಗಳಿಸಿದ ಏಷ್ಯದ ವಿಕೆಟ್‍ಕೀಪರ್ ಎಂಬ ಹಿರಿಮೆಗೆ ಪಾತ್ರರಾದರು. ಮಾತ್ರವಲ್ಲ ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಯ್ಯದ್ ಕಿರ್ಮಾನಿ ದಾಖಲೆಯನ್ನು ಮುರಿದರು.

ಕಿರ್ಮಾನಿ ಆಸ್ಟ್ರೇಲಿಯದಲ್ಲಿ ಒಟ್ಟು 471 ರನ್ ಗಳಿಸಿದ್ದರು. ಪಂತ್ ಆಸ್ಟ್ರೇಲಿಯ ನೆಲದಲ್ಲಿ 56.88ರ ಸರಾಸರಿಯಲ್ಲಿ ಒಟ್ಟು 512 ರನ್ ಗಳಿಸಿದ್ದಾರೆ. 

ಪಂತ್ ಭಾರತೀಯ ವಿಕೆಟ್‍ಕೀಪರ್‍ಗಳ ಪೈಕಿ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಇನಿಂಗ್ಸ್ ನಲ್ಲಿ ಗರಿಷ್ಠ ರನ್ ಗಳಿಸಿದ್ದಾರೆ. ಪಂತ್ ಎರಡನೇ  ಬಾರಿ ಈ ಸಾಧನೆ ಮಾಡಿದ್ದಾರೆ. ಈಗ ನಡೆಯುತ್ತಿರುವ ಸಿಡ್ನಿ ಟೆಸ್ಟ್ ನ 5ನೇ ದಿನವಾದ ಸೋಮವಾರ ಪಂತ್ 97 ರನ್ ಗಳಿಸಿದ್ದರು. 2018ರಲ್ಲಿ ದಿ ಓವಲ್ ನಲ್ಲಿ ಇಂಗ್ಲೆಂಡ್ ವಿರುದ್ಧ 114 ರನ್ ಗಳಿಸಿದ್ದರು. 

ಎಂಎಸ್ ಧೋನಿ 2007ರಲ್ಲಿ ಇಂಗ್ಲೆಂಡ್ ವಿರುದ್ಧ ಲಾಡ್ರ್ಸ್ ನಲ್ಲಿ ಔಟಾಗದೆ 76 ರನ್ ಹಾಗೂ 2016ರಲ್ಲಿ ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ಔಟಾಗದೆ 67 ರನ್ ಗಳಿಸಿದ್ದ ಪಾರ್ಥಿವ್ ಪಟೇಲ್ ಟೆಸ್ಟ್ ನ 4ನೇ ಇನಿಂಗ್‍ನಲ್ಲಿ ಗರಿಷ್ಠ ರನ್ ಗಳಿಸಿದ ವಿಕೆಟ್ ಕೀಪರ್ ಗಳ ಪಟ್ಟಿಯಲ್ಲಿ ಉಳಿದೆರಡು ಸ್ಥಾನದಲ್ಲಿದ್ದಾರೆ.

ಶನಿವಾರ 36 ರನ್ ಗಳಿಸಿದ್ದ ಪಂತ್ ಆಸ್ಟ್ರೇಲಿಯದಲ್ಲಿ ಸತತ 9 ಟೆಸ್ಟ್ ಇನಿಂಗ್ಸ್ ಗಳಲ್ಲಿ 25 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿ ಅಪರೂಪದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಇಂಗ್ಲೆಂಡ್‍ನ ವಲ್ಲಿ ಹ್ಯಾಮಂಡ್, ಭಾರತದ ರುಸಿ ಸುರ್ಟಿ ಹಾಗೂ ವಿಂಡೀಸ್ ನ ಮಾಜಿ ನಾಯಕ ವಿವಿಯನ್ ರಿಚರ್ಡ್ಸ್ ದಾಖಲೆಯನ್ನು ಮುರಿದರು.

ಪಂತ್ ಆಸ್ಟ್ರೇಲಿಯದಲ್ಲಿ ಸತತ 10 ಇನಿಂಗ್ಸ್ ಗಳಲ್ಲಿ 25,28,36, 30, 39, 33, 159, 29, 36 ಹಾಗೂ 97 ರನ್ ಗಳಿಸಿದ್ದಾರೆ. 2018-19ರ ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸದಲ್ಲಿ ಎಲ್ಲ ಟೆಸ್ಟ್ ಪಂದ್ಯಗಳನ್ನು ಆಡಿದ್ದ ಪಂತ್ ಇದೀಗ 50ಕ್ಕೂ ಅಧಿಕ ಸರಾಸರಿಯಲ್ಲಿ 400ಕ್ಕೂ ಅಧಿಕ ರನ್ ಗಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News