ನೀವು ತೆರಿಗೆ ಪಾವತಿಸುವಷ್ಟು ಆದಾಯವನ್ನು ಹೊಂದಿಲ್ಲವೇ? ಆದರೂ ಈ ಪ್ರಕರಣಗಳಲ್ಲಿ ನೀವು ಐಟಿಆರ್ ಸಲ್ಲಿಸಬೇಕಾಗುತ್ತದೆ

Update: 2021-01-11 13:47 GMT

ನೀವು ಭಾರತೀಯ ಪ್ರಜೆಯಾಗಿದ್ದು,ಹಣಕಾಸು ವರ್ಷ (ಎಪ್ರಿಲ್‌ನಿಂದ ಮಾರ್ಚ್)ದಲ್ಲಿ ನಿಮ್ಮ ಆದಾಯವು ತೆರಿಗೆಗೆ ಅರ್ಹ ಮಿತಿಗಿಂತ ಹೆಚ್ಚಾಗಿದ್ದರೆ ಆ ವರ್ಷಕ್ಕಾಗಿ ನೀವು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವುದು ಅಗತ್ಯವಾಗುತ್ತದೆ. ಇದೇ ರೀತಿ ಹಣಕಾಸು ವರ್ಷದಲ್ಲಿ ನಿಮ್ಮ ಆದಾಯವು ತೆರಿಗೆಗೆ ಅರ್ಹ ಮಿತಿಗಿಂತ ಕಡಿಮೆಯಿದ್ದರೆ ಸಾಮಾನ್ಯವಾಗಿ ನೀವು ಐಟಿಆರ್ ಸಲ್ಲಿಸಬೇಕಿಲ್ಲ. ಆದರೆ ಇದು ಎಲ್ಲ ಪ್ರಕರಣಗಳಲ್ಲಿಯೂ ಅನ್ವಯಿಸದಿರಬಹುದು ಮತ್ತು ಹಣಕಾಸು ವರ್ಷದಲ್ಲಿ ತಮ್ಮ ಒಟ್ಟು ಆದಾಯವು ತೆರಿಗೆಗೆ ಅರ್ಹ ಮಿತಿಯನ್ನು ದಾಟದಿದ್ದರೂ ಕೆಲವರು ಐಟಿಆರ್ ಸಲ್ಲಿಸುವುದು ಅಗತ್ಯವಾಗಬಹುದು.

 ಆದಾಯ ತೆರಿಗೆ ವಿನಾಯಿತಿಗಳಿಗೆ ಮುನ್ನ ಹಣಕಾಸು ವರ್ಷದಲ್ಲಿ ಒಟ್ಟು ಆದಾಯವು 2,50,000 ರೂ.ಗಳಿಗಿಂತ ಹೆಚ್ಚಿದ್ದಾಗ ಅಂತಹ ವ್ಯಕ್ತಿಗಳು ಐಟಿಆರ್‌ನ್ನು ಸಲ್ಲಿಸುವ ಬದ್ಧತೆಯನ್ನು ಹೊಂದಿರುತ್ತಾರೆ. ಆದರೆ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆಗೆ ಅರ್ಹ ಮಿತಿಗಿಂತ ಕಡಿಮೆಯಿದ್ದರೂ ಈ ಕೆಳಗಿನ ವರ್ಗಗಳಿಗೆ ಸೇರಿದ ವ್ಯಕ್ತಿಗಳು ಐಟಿಆರ್ ಸಲ್ಲಿಸುವುದು ಕಡ್ಡಾಯವಾಗಿದೆ.

* ವಿದೇಶದಲ್ಲಿ ಯಾವುದೇ ಆಸ್ತಿ (ಯಾವುದೇ ಸಂಸ್ಥೆಯಲ್ಲಿ ಹಣಕಾಸು ಹಿತಾಸಕ್ತಿ ಸೇರಿದಂತೆ)ಯನ್ನು ಹೊಂದಿದ ವ್ಯಕ್ತಿಗಳು

* ವಿದೇಶದಲ್ಲಿಯ ಯಾವುದೇ ಖಾತೆಯಲ್ಲಿ ಸಹಿ ಮಾಡುವ ಅಧಿಕಾರವನ್ನು ಹೊಂದಿರುವ ವ್ಯಕ್ತಿಗಳು

* ವಿದೇಶದಲ್ಲಿರುವ ಯಾವುದೇ ಆಸ್ತಿ (ಯಾವುದೇ ಸಂಸ್ಥೆಯಲ್ಲಿ ಹಣಕಾಸು ಹಿತಾಸಕ್ತಿ ಸೇರಿದಂತೆ)ಯ ಫಲಾನುಭವಿಯಾಗಿರುವ ವ್ಯಕ್ತಿಗಳು

 2019ರ ಮುಂಗಡಪತ್ರವು ಸಹ ಈ ಕೆಳಗಿನ ವರ್ಗಗಳನ್ನು ಈ ಗುಂಪಿಗೆ ಸೇರಿಸಿದೆ,ಅಂದರೆ ಈ ಗುಂಪಿಗೆ ಸೇರಿದ ವ್ಯಕ್ತಿಗಳೂ ಹಣಕಾಸು ವರ್ಷದಲ್ಲಿಯ ತಮ್ಮ ಒಟ್ಟು ಆದಾಯ ತೆರಿಗೆಗೆ ಅರ್ಹ ಮಿತಿಗಿಂತ ಕಡಿಮೆಯಿದ್ದರೂ ಐಟಿಆರ್ ಸಲ್ಲಿಸುವುದು ಕಡ್ಡಾಯವಾಗಿದೆ.

* ಹಣಕಾಸು ವರ್ಷವೊಂದರಲ್ಲಿ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕಿನಲ್ಲಿ ಯಾವುದೇ ಚಾಲ್ತಿ ಖಾತೆಯಲ್ಲಿ ಒಂದು ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಠೇವಣಿಯಿರಿಸಿದ ವ್ಯಕ್ತಿಗಳು

* ಹಣಕಾಸು ವರ್ಷವೊಂದರಲ್ಲಿ ವಿದೇಶ ಪ್ರಯಾಣಕ್ಕಾಗಿ ಎರಡು ಲ.ರೂ.ಗೂ ಹೆಚ್ಚಿನ ಹಣವನ್ನು ವೆಚ್ಚ ಮಾಡಿದ ವ್ಯಕ್ತಿಗಳು

* ಹಣಕಾಸು ವರ್ಷದಲ್ಲಿ ಒಂದು ಲ.ರೂ.ಅಥವಾ ಹೆಚ್ಚಿನ ವಿದ್ಯುತ್ ಶುಲ್ಕವನ್ನು ಪಾವತಿಸಿರುವ ವ್ಯಕ್ತಿಗಳು

ಯಾವುದೇ ತೆರಿಗೆ ಒಪ್ಪಂದದಡಿ ಪರಿಹಾರ ಹಕ್ಕು ಮಂಡಿಸಲು ,ಹೆಚ್ಚುವರಿಯಾಗಿ ಮುರಿದುಕೊಂಡಿರುವ ತೆರಿಗೆಯನ್ನು ವಾಪಸ್ ಪಡೆಯಲು ಅಥವಾ ವೈಯಕ್ತಿಕ ಸಾಲಕ್ಕೆ ಅರ್ಜಿ ಹಾಕುವ ಸಂದರ್ಭದಲ್ಲಿಯೂ ಐಟಿಆರ್ ಅನ್ನು ಸಲ್ಲಿಸುವುದು ಅಗತ್ಯವಾಗಬಹುದು.

 ಹೀಗಾಗಿ ವ್ಯಕ್ತಿಯ ಒಟ್ಟು ಆದಾಯವೊಂದೇ ಆತನ ಐಟಿಆರ್‌ನ್ನು ಸಲ್ಲಿಸುವ ಬದ್ಧತೆಯನ್ನು ನಿರ್ಧರಿಸುವ ಏಕೈಕ ಮಾನದಂಡವಲ್ಲ ಮತ್ತು ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಈ ಮೇಲ್ಕಾಣಿಸಿದ ಎಲ್ಲ ಅಂಶಗಳನ್ನು ವಿಶ್ಲೇಷಿಸುವುದು ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News