ಆಂಧ್ರಪ್ರದೇಶದಲ್ಲಿ ದೇವಳ ರಾಜಕಾರಣ: 9 ದೇವಸ್ಥಾನಗಳ ಮರುನಿರ್ಮಾಣಕ್ಕೆ ಸಿ.ಎಂ ಜಗನ್‌ ಶಿಲಾನ್ಯಾಸ

Update: 2021-01-11 14:04 GMT

ಹೈದರಾಬಾದ್,ಜ.11: ರಸ್ತೆ ಅಗಲೀಕರಣಕ್ಕೆ ಅನುವಾಗಲೆಂದು 2016ರಲ್ಲಿ ಹಿಂದಿನ ಟಿಡಿಪಿ ಸರಕಾರ ಕೆಡವಿದ್ದ ಒಂಬತ್ತು ದೇವಸ್ಥಾನಗಳ ಮರುನಿರ್ಮಾಣಕ್ಕೆ ಮುಖ್ಯಮಂತ್ರಿ  ವೈಎಸ್ ಜಗನ್ ಮೋಹನ್ ರೆಡ್ಡಿ ಕಳೆದ ಶುಕ್ರವಾರ ಶಿಲಾನ್ಯಾಸ  ನೆರವೇರಿಸಿದ್ದಾರೆ. ರಾಜ್ಯದಲ್ಲಿ ದೇವಸ್ಥಾನಗಳ ಮೇಲೆ ನಡೆದ ಸರಣಿ ದಾಳಿಗಳಿಂದ ವಿಪಕ್ಷಗಳಿಂದ ಟೀಕೆಗೆ ಗುರಿಯಾಗಿರುವ ಜಗನ್ ಮೋಹನ್ ರೆಡ್ಡಿ ಸರಕಾರ ತನ್ನ ಈ ಕ್ರಮದ ಮೂಲಕ ಹಿಂದುಗಳನ್ನು ವಿಶ್ವಾಸಕ್ಕೆ ಪಡೆಯುವ ಯತ್ನ ನಡೆಸುತ್ತಿದೆ ಎಂದೇ ಬಣ್ಣಿಸಲಾಗುತ್ತಿದೆ ಎಂದು theprint.in ವರದಿ ಮಾಡಿದೆ.

ಹಿಂದುಗಳ ಭಾವನೆಗಳನ್ನು ರಕ್ಷಿಸಲು ವಿಫಲರಾಗಿದ್ದಾರೆ ಎಂಬ ವಿಪಕ್ಷಗಳ ಹಾಗೂ ಟಿಡಿಪಿಯ ಆರೋಪಗಳಿಗೆ ತಿರುಗೇಟು ನೀಡಲೆಂದೇ ಒಟ್ಟು ರೂ. 70 ಲಕ್ಷ ವೆಚ್ಚದ ಈ ಯೋಜನೆ ಕೈಗೆತ್ತಿಕೊಳ್ಳಲು ಜಗನ್‍ಮೋಹನ್ ರೆಡ್ಡಿ ನಿರ್ಧರಿಸಿದ್ದಾರೆಂದೂ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಡಿಸೆಂಬರ್ ತಿಂಗಳಿನಲ್ಲಿ ವಿಝಿಯನಗರಂ ಜಿಲ್ಲೆಯ ರಾಮತೀರ್ಥಂ ಗ್ರಾಮದಲ್ಲಿ 400 ವರ್ಷ ಹಳೆಯ ದೇವಸ್ಥಾನದಲ್ಲಿದ್ದ ರಾಮನ ಮೂರ್ತಿಯನ್ನು ಹಾನಿಗೊಳಿಸಲಾದ ಘಟನೆ ಸಾಕಷ್ಟು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು ಬಿಜೆಪಿ ರಾಜ್ಯಾದ್ಯಂತ ರಥಯಾತ್ರೆಯನ್ನೂ ಕೈಗೊಳ್ಳಲು ತೀರ್ಮಾನಿಸಿದೆ.

ಜನವರಿಯಲ್ಲಿ ರಾಜಮಹೇಂದ್ರವರ್ಮನ್  ಹಾಗೂ ವಿಶಾಖಟ್ಟಣಂನಲ್ಲಿನ ಎರಡು ದೇವಳಗಳಲ್ಲಿ ದಾಂಧಲೆ ನಡೆದಿದ್ದರೆ ಜನವರಿಯಲ್ಲಿ ಯೆಟಿಗೈರಂಪೇಟ ಎಂಬ ಗ್ರಾಮದಲ್ಲಿನ ವಿನಾಯಕನ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News