×
Ad

ಚೀನಾದ ಹೆಸರು ಅಳಿಸಿ ಹೊಸ ಪಾಸ್‌ಪೋರ್ಟ್ ತಂದ ತೈವಾನ್

Update: 2021-01-11 21:17 IST
photo- twitter

ತೈಪೆ (ತೈವಾನ್), ಜ. 11: ತನ್ನ ಹೆಸರಿಗೆ ಹೆಚ್ಚಿನ ಒತ್ತು ನೀಡುವ ನೂತನ ಪಾಸ್‌ಪೋರ್ಟನ್ನು ತೈವಾನ್ ಸೋಮವಾರ ಬಿಡುಗಡೆ ಮಾಡಿದೆ. ಕೊರೋನ ವೈರಸ್ ಸಾಂಕ್ರಾಮಿಕದ ಅವಧಿಯಲ್ಲಿ ತೈವಾನ್ ನನ್ನು ಚೀನಾ ಎಂಬುದಾಗಿ ತಪ್ಪಾಗಿ ಭಾವಿಸಲು ಅವಕಾಶ ನೀಡುವ ಗೊಂದಲವನ್ನು ನಿವಾರಿಸುವುದು ಚೀನಾದ ಹೆಚ್ಚುತ್ತಿರುವ ಆಕ್ರಮಣಶೀಲತೆಯನ್ನು ಕೊನೆಗೊಳಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತೈವಾನ್ ಹೇಳಿದೆ.

ತೈವಾನ್‌ನ ಮೊದಲಿನ ಪಾಸ್‌ಪೋರ್ಟ್‌ಗಳಲ್ಲಿ ಅದರ ಔಪಚಾರಿಕ ಹೆಸರು ‘ರಿಪಬ್ಲಿಕ್ ಆಫ್ ಚೀನಾ’ ಎನ್ನುವುದನ್ನು ಮೇಲ್ಭಾಗದಲ್ಲಿ ದೊಡ್ಡ ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯಲಾಗಿದೆ ಹಾಗೂ ‘ತೈವಾನ್’ ಎನ್ನುವುದನ್ನು ಕೆಳಗೆ ಸಣ್ಣ ಅಕ್ಷರಗಳಲ್ಲಿ ಬರೆಯಲಾಗಿದೆ. ಇದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗೊಂದಲಕ್ಕೆ ಕಾರಣವಾಗಿತ್ತು ಎಂದು ತೈವಾನ್ ಸರಕಾರ ಹೇಳಿದೆ.

ಆರಂಭಿಕ ಕೊರೋನ ವೈರಸ್ ದಿನಗಳಲ್ಲಿ ವಿದೇಶಗಳಲ್ಲಿ ತನ್ನ ಪ್ರಜೆಗಳನ್ನು ಚೀನಾದ ಪ್ರಜೆಗಳು ಎಂಬುದಾಗಿ ತಪ್ಪಾಗಿ ಭಾವಿಸಿ ಅವರನ್ನು ಕಠಿಣ ನಿರ್ಬಂಧಗಳಿಗೆ ಒಳಪಡಿಸಲಾಗಿತ್ತು ಎಂದು ತೈವಾನ್ ಹೇಳಿದೆ.

ಹೊಸ ಪಾಸ್‌ಪೋರ್ಟ್‌ನಲ್ಲಿ ‘ತೈವಾನ್’ ಎಂಬುದಾಗಿ ದೊಡ್ಡ ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯಲಾಗಿದೆ ಹಾಗೂ ‘ರಿಪಬ್ಲಿಕ್ ಆಫ್ ಚೀನಾ’ವನ್ನು ಅಳಿಸಲಾಗಿದೆ. ಆದರೂ, ಚೀನೀ ಭಾಷೆಯಲ್ಲಿನ ಅದರ ಹೆಸರು ಹಾಗೂ ರಾಷ್ಟ್ರೀಯ ಲಾಂಛನದ ಸುತ್ತ ಸಣ್ಣ ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯಲಾಗಿರುವ ಚೀನೀ ಹೆಸರನ್ನು ಉಳಿಸಲಾಗಿದೆ.

ಅಮೆರಿಕ ನಿರ್ಬಂಧ ತೆರವು ದೊಡ್ಡ ಉತ್ತೇಜಕ ಕ್ರಮ: ತೈವಾನ್

ತೈವಾನ್ ಅಧಿಕಾರಿಗಳೊಂದಿಗೆ ಅಮೆರಿಕದ ಅಧಿಕಾರಿಗಳು ವ್ಯವಹರಿಸುವುದರ ಮೇಲೆ ವಿಧಿಸಲಾಗಿರುವ ನಿರ್ಬಂಧಗಳನ್ನು ತೆರವುಗೊಳಿಸಿರುವುದಕ್ಕಾಗಿ ತೈವಾನ್ ಅಮೆರಿಕಕ್ಕೆ ಕೃತಜ್ಞತೆ ಸಲ್ಲಿಸಿದೆ ಹಾಗೂ ಇದು ‘ಮಹತ್ವದ ಬೆಳವಣಿಗೆ’ ಎಂಬುದಾಗಿ ಬಣ್ಣಿಸಿದೆ.

ಇದು ತೈವಾನ್‌ನ ಅತ್ಯಂತ ಪ್ರಮುಖ ಜಾಗತಿಕ ಬೆಂಬಲಿಗನೊಂದಿಗಿನ ಸಂಬಂಧವರ್ಧನೆಗೆ ದೊಡ್ಡ ಉತ್ತೇಜಕ ಕ್ರಮವಾಗಿದೆ ಎಂದು ತೈವಾನ್ ವಿದೇಶ ಸಚಿವ ಜೋಸೆಫ್ ವು ಸೋಮವಾರ ಹೇಳಿದರು.

‘‘ತೈವಾನ್-ಅಮೆರಿಕ ಸಂಬಂಧ ಹೊಸ ಎತ್ತರಕ್ಕೆ ಹೋಗಲು ಇದು ಬಹುದೊಡ್ಡ ಉತ್ತೇಜಕ ಕ್ರಮವಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

ಚೀನಾದಿಂದ ಪ್ರತೀಕಾರಾತ್ಮಕ ಕ್ರಮಗಳ ಬೆದರಿಕೆ

ಬೀಜಿಂಗ್, ಜ. 11: ತೈವಾನ್ ಮತ್ತು ಅವೆುರಿಕದ ಅಧಿಕಾರಿಗಳ ನಡುವಿನ ನೇರ ಸಂಪರ್ಕಕ್ಕೆ ಇದ್ದ ನಿರ್ಬಂಧಗಳನ್ನು ಅಮೆರಿಕ ತೆರವುಗೊಳಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಚೀನಾ, ಇದಕ್ಕೆ ಪ್ರತೀಕಾರವಾಗಿ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದೆ.

ಈ ಕ್ರಮವನ್ನು ಚೀನಾ ಪ್ರಬಲವಾಗಿ ಖಂಡಿಸುತ್ತದೆ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಹೇಳಿದರು ಹಾಗೂ ಅಮೆರಿಕ-ಚೀನಾ ರಾಜತಾಂತ್ರಿಕ ಸಂಬಂಧಗಳ ನಿಯಮಗಳನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News