ಪಾಕ್ ಉರ್ದು ಕವಿ ನಾಸಿರ್ ತುರಾಬಿ ನಿಧನ
Update: 2021-01-11 21:22 IST
ಕರಾಚಿ (ಪಾಕಿಸ್ತಾನ), ಜ. 11: ಭಾರತ ಸಂಜಾತ, ಪಾಕಿಸ್ತಾನದ ಖ್ಯಾತ ಉರ್ದು ಕವಿ ಹಾಗೂ ಲೇಖಕ ನಾಸಿರ್ ತುರಾಬಿ ಕರಾಚಿಯಲ್ಲಿ ರವಿವಾರ ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ ಎಂದು ‘ಡಾನ್ ನ್ಯೂಸ್’ ಸೋಮವಾರ ವರದಿ ಮಾಡಿದೆ.
ಅವರ ಅಂತ್ಯಸಂಸ್ಕಾರವನ್ನು ಕರಾಚಿಯ ವಾದಿ-ಎ-ಹುಸೈನ್ ಸ್ಮಶಾನದಲ್ಲಿ ಸೋಮವಾರ ನೆರವೇರಿಸಲಾಗಿದೆ.
ತುರಾಬಿ 1945 ಜೂನ್ 15ರಂದು ಹೈದರಾಬಾದ್ ಡೆಕ್ಕನ್‌ನಲ್ಲಿ ಜನಿಸಿದರು. ಖ್ಯಾತ ಧಾರ್ಮಿಕ ವಿದ್ವಾಂಸರಾಗಿದ್ದ ಅವರ ತಂದೆ ಅಲ್ಲಮ ರಶೀದ್ ತುರಾಬಿ 1947ರ ವಿಭಜನೆಯ ಬಳಿಕ ಪಾಕಿಸ್ತಾನಕ್ಕೆ ತೆರಳಿ ಕರಾಚಿಯಲ್ಲಿ ನೆಲೆಸಿದರು.
1971ರಲ್ಲಿ ಬಾಂಗ್ಲಾದೇಶ ಪಾಕಿಸ್ತಾನದಿಂದ ಪ್ರತ್ಯೇಕಗೊಂಡಾಗ ಬರೆದ ‘ವೋ ಹಮ್‌ಸಫರ್ ಥಾ’ ಎನ್ನುವ ಗಝಲ್ ಅವರ ಖ್ಯಾತ ಕೃತಿಗಳ ಪೈಕಿ ಒಂದಾಗಿದೆ.