ಆಸ್ಟ್ರೇಲಿಯ ವಿರುದ್ದ ಭಾರತ ರೋಚಕ ಡ್ರಾ: ಮಾಜಿ ಆಟಗಾರರಿಂದ ವ್ಯಾಪಕ ಪ್ರಶಂಸೆ

Update: 2021-01-11 18:15 GMT

ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ದ ಸಿಡ್ನಿಯಲ್ಲಿ ಸೋಮವಾರ ಕೊನೆಗೊಂಡ ಮೂರನೆ ಟೆಸ್ಟ್ ಪಂದ್ಯದಲ್ಲಿ ಸೋಲಿನ ಭೀತಿಯಲ್ಲಿದ್ದ ಭಾರತವು ಡ್ರಾ ಸಾಧಿಸಲು ನೆರವಾಗಿರುವ ಆಟಗಾರರನ್ನು ಮಾಜಿ ಕ್ರಿಕೆಟಿಗರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸಿಡ್ನಿ ಟೆಸ್ಟ್ ಪಂದ್ಯವನ್ನು ಗೆಲ್ಲಲು ಭಾರತವು 407 ರನ್ ಗಳಿಸುವ ಅಗತ್ಯವಿತ್ತು. ರಿಷಭ್ ಪಂತ್ 97 ರನ್ ಗಳಿಸಿದಾಗ ಭಾರತವು ಗೆಲುವಿನ ವಿಶ್ವಾಸದಲ್ಲಿತ್ತು. ಬಳಿಕ ಚೇತೇಶ್ವರ ಪೂಜಾರ 77 ರನ್ ಗಳಿಸಿ ಔಟಾದಾಗ ಭಾರತದ ಗೆಲುವಿನ ವಿಶ್ವಾಸ ಕಮರಿಹೋಗಿತ್ತು. ಆದರೆ ಹನುಮ ವಿಹಾರಿ ಹಾಗೂ ರವೀಂದ್ರ ಜಡೇಜ ಗಾಯದ ಸಮಸ್ಯೆ ಎದರಿಸುತ್ತಿದ್ದ ಕಾರಣ ಆಸ್ಟ್ರೇಲಿಯ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ, ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ಅಶ್ವಿನ್  ಹಾಗೂ ಹನುಮ ವಿಹಾರಿ ಭಾರತ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನೆರವಾದರು.

ಕೊನೆಯ ಸೆಶನ್ ಪೂರ್ತಿ ಆಡಿದ್ದ ಈ ಜೋಡಿ 259 ಎಸೆತಗಳನ್ನು ಎದುರಿಸಿ 6ನೇ ವಿಕೆಟ್ ಗೆ 62 ರನ್ ಸೇರಿಸಿತು. ಭಾರತ ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿತು. ಸೋಲಿನ ಭೀತಿಯಲ್ಲಿದ್ದ ಭಾರತವು ರೋಚಕ ಡ್ರಾ ಸಾಧಿಸಿತು.

ಭಾರತದ ಅಮೋಘ ಪ್ರದರ್ಶನಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ, ಹಂಗಾಮಿ ನಾಯಕ ಅಜಿಂಕ್ಯ ರಹಾನೆ, ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್, ಮಾಜಿ ಬ್ಯಾಟ್ಸ್ ಮನ್ ವಿವಿಎಸ್ ಲಕ್ಷ್ಮಣ್ ಮತ್ತಿತರರು ಶ್ಲಾಘಿಸಿದ್ದಾರೆ.

ಈಗಲಾದರೂ ಭಾರತ ತಂಡದಲ್ಲಿ ಪೂಜಾರ, ಪಂತ್ ಹಾಗೂ ಅಶ್ವಿನ್ ಅವರ ಮಹತ್ವವನ್ನು ನಾವೆಲ್ಲರೂ ಮನಗಾಣುತ್ತೇವೆ ಎಂದು ಭಾವಿಸುತ್ತೇನೆ. ಟೆಸ್ಟ್ ಕ್ರಿಕೆಟ್ ನಲ್ಲಿ ಗುಣಮಟ್ಟದ ಬೌಲಿಂಗ್ ಎದುರು ಬ್ಯಾಟಿಂಗ್ ಮಾಡುವುದು ಯಾವಾಗಲೂ ಚೆಂಡನ್ನು ದಂಡಿಸುವುದಲ್ಲ. ಟೆಸ್ಟ್ ನಲ್ಲಿ ಸಮಾರು 400 ವಿಕೆಟ್ ಗಳು ಹಾಗೆಯೇ ಸಿಗುವುದಿಲ್ಲ. ಭಾರತ ಉತ್ತಮ ಹೋರಾಟ ನೀಡಿದೆ…ಇದೀಗ ಸರಣಿ ಗೆಲ್ಲುವ ಸಮಯ ಬಂದಿದೆ ಎಂದು ಗಂಗುಲಿ ಟ್ವೀಟಿಸಿದ್ದಾರೆ.

ಟೀಮ್ ಇಂಡಿಯಾದ ಬಗ್ಗೆ ನಿಜಕ್ಕೂ ಹೆಮ್ಮೆಯಾಗುತ್ತಿದೆ. ಅತ್ಯುತ್ತಮವಾಗಿ ಆಡಿರುವ ರಿಷಭ್ ಪಂತ್, ಚೇತೇಶ್ವರ ಪೂಜಾರ, ಹನುಮ ವಿಹಾರಿಯವರನ್ನು ವಿಶೇಷವಾಗಿ ಉಲ್ಲೇಖಿಸಬೇಕಾಗಿದೆ ಎಂದು ತೆಂಡುಲ್ಕರ್ ಟ್ವೀಟಿಸಿದರು.

ನೊಂದಿದ್ದೆವು, ಗಾಯಗೊಂಡಿದ್ದೆವು. ಆದರೆ, ಸಣ್ಣತನ ಪ್ರದರ್ಶಿಸಲಿಲ್ಲ. ಕೊನೆಯ ತನಕ ಹುಡುಗರು ತೋರಿರುವ ಹೋರಾಟ ನಿಜಕ್ಕೂ ಖುಷಿ ತಂದಿದೆ. ಸಾಕಷ್ಟು ಕಲಿಯಕ್ಕಿದೆ ಹಾಗೂ ಸುಧಾರಣೆಯಾಗಬೇಕಾಗಿದೆ. ನಾವು ಇದೀಗ ಬ್ರಿಸ್ಬೇನ್ ಟೆಸ್ಟ್ ಎದುರು ನೋಡುತ್ತಿದ್ದೇವೆ ಎಂದು ಹಂಗಾಮಿ ನಾಯಕ ರಹಾನೆ ಟ್ವೀಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News