ಉಪ್ಪಿನಂಗಡಿ: ವರ್ಷ ಕಳೆಯುವಾಗಲೇ ನೀರಿಲ್ಲದೆ ಬರಡಾದ ನಾಲಾಯಗುಂಡಿ ಕಿಂಡಿ ಅಣೆಕಟ್ಟು!

Update: 2021-01-12 07:03 GMT

ಉಪ್ಪಿನಂಗಡಿ, ಜ.12: ಇಲ್ಲಿನ ನಾಲಾಯಗುಂಡಿ ಎಂಬಲ್ಲಿ ಸುಮಾರು ಒಂದು ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಗೊಂಡ ಕಿಂಡಿ ಅಣೆಕಟ್ಟು ವರ್ಷ ಕಳೆಯುವ ಮೊದಲೇ ನಿರ್ವಹಣೆಯಿಲ್ಲದೆ ಸೊರಗಿ ಹೋಗಿದೆ. ಕೃಷಿ ಚಟುವಟಿಕೆ ಹಾಗೂ ಅಂತರ್ಜಲ ವೃದ್ಧಿಯ ಮೂಲ ಉದ್ದೇಶವನ್ನಿಟ್ಟುಕೊಂಡು ಈ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿದ್ದರೂ, ಅದು ಈಡೇರದೇ ಸಂಪರ್ಕ ಸೇತುಗೆ ಮಾತ್ರ ಇದು ಸೀಮಿತವಾಗಿದೆ.

ನಾಲಾಯಗುಂಡಿಯಲ್ಲಿ ಸಣ್ಣ ಹೊಳೆಗೆ 31.70 ಮೀಟರ್ ಎತ್ತರದ ಕಿಂಡಿ ಅಣೆಕಟ್ಟನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸುಮಾರು 1 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. 2019ರ ಡಿಸೆಂಬರ್ 7ರಂದು ಇದು ಲೋಕಾರ್ಪಣೆಗೊಂಡಿತು. 1.95 ಎಂ.ಸಿ.ಎಫ್.ಟಿ. ನೀರು ಶೇಖರಣಾ ಸಾಮರ್ಥ್ಯ ಇದರದ್ದಾಗಿದ್ದು, ಇದರ ಅಚ್ಚುಕಟ್ಟು 40 ಎಕರೆ ಪ್ರದೇಶಕ್ಕೆ ವ್ಯಾಪಿಸಿತ್ತು. ಇದರಲ್ಲಿ 14 ಕಿಂಡಿಗಳಿದ್ದು, 1.80x3 ಮೀ. ಗೇಟಿನ ಗಾತ್ರವಿದೆ. ಇದಕ್ಕೆ ಕಿರಾಲ್ ಬೋಗಿ ಹಲಗೆಯನ್ನಿಟ್ಟು ನೀರು ನಿಲ್ಲಿಸಲಾಗುತ್ತಿತ್ತು. ಈ ಅಣೆಕಟ್ಟಿನ ಮೇಲ್ಮೈ ದ್ವಿಚಕ್ರ ವಾಹನ, ಜೀಪು, ಪಿಕಪ್‌ನಂತರ ಮಧ್ಯಮ ವಾಹನಗಳ ಸಂಚಾರಕ್ಕೆ ಅನುಕೂಲವಾಗುಂತೆ ನಿರ್ಮಾಣವಾಗಿದ್ದು, ಇದರಿಂದ ನಾಲಾಯಗುಂಡಿಯಿಂದ ಹಿರೇಬಂಡಾಡಿಗೆ ಸಂಪರ್ಕ ಸೇತುವಾಗಿ ಇದು ಉಪಯೋಗವಾಗುತ್ತಿದೆ. ಕಿಂಡಿ ಅಣೆಕಟ್ಟು ನಿರ್ಮಾಣವಾಗಿ ಲೋಕಾರ್ಪಣೆಯ ಸಮಯದಲ್ಲಿ ಈ ಕಿಂಡಿ ಅಣೆಕಟ್ಟಿನ ಮೇಲ್ಮಟ್ಟದವರೆಗೆ ನೀರನ್ನು ಸಂಗ್ರಹಿಸಲಾಗಿತ್ತು. ಬಳಿಕದ ಮಳೆಗಾಲದಲ್ಲಿ ಅಣೆಕಟ್ಟಿಗೆ ಅಳವಡಿಸಲಾದ ಹಲಗೆಗಳನ್ನು ತೆಗೆಯಲಾಗಿದ್ದು, ಮತ್ತೆ ಮಳೆಗಾಲ ಕಳೆದು ಬೇಸಿಗೆ ಬಂದರೂ ನೀರು ಸಂಗ್ರಹಿಸುವ ಕಾರ್ಯ ಮಾತ್ರ ಇಲ್ಲಿ ಆಗಿಲ್ಲ. ಆದ್ದರಿಂದ ಇದು ಈಗ ತನ್ನ ಮೂಲ ಉದ್ದೇಶವನ್ನು ಕಳೆದುಕೊಂಡು ಕೇವಲ ಸಂಪರ್ಕ ಸೇತುವಾಗಿ ಮಾತ್ರ ಉಪಯೋಗಕ್ಕೆ ಬಂದಿದೆ.

ನಿರ್ವಹಣೆಗೂ ಖರ್ಚಿದೆ: ಈ ಕಿಂಡಿ ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶ ಸುತ್ತಮುತ್ತಲಿನ 40 ಎಕರೆಯಾಗಿದ್ದರೂ, ಇಲ್ಲಿನ ರೈತರಿಗೆ ಇದರ ನೇರ ಉಪಯೋಗ ಸಿಗುವುದಿಲ್ಲ. ಯಾಕೆಂದರೆ ಇಲ್ಲಿ ಶೇಖರಣೆಯಾಗುವ ನೀರು ಇಲ್ಲೇ ಇಂಗುವಂತೆ ಮಾಡಲಾಗುತ್ತದೆಯೇ ಹೊರತು, ಇಲ್ಲಿಂದ ಕಾಲುವೆಗಳ ಮೂಲಕ ರೈತರ ಜಮೀನಿಗೆ ಹರಿಸುವ ಯೋಜನೆ ಆಗಿಲ್ಲ. ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಸುಮಾರು 1 ಕೋ. ರೂ. ವೆಚ್ಚದಲ್ಲಿ ಅಣೆಕಟ್ಟನ್ನು ನಿರ್ಮಿಸಿ ತನ್ನ ಕೆಲಸ ಮುಗಿಸಿದೆ. ಮಳೆಗಾಲ ಮುಗಿಯುವಾಗ ಇದಕ್ಕೆ ಹಲಗೆಗಳನ್ನು ಜೋಡಿಸಿ ಅದರ ನಡುವೆ ಮಣ್ಣು ತುಂಬಲು ಹಾಗೂ ಮಳೆಗಾಲ ಆರಂಭವಾಗುವಾಗ ಅದರ ಹಲಗೆ ತೆಗೆಯಲು ಹೀಗೆ ವರ್ಷದಲ್ಲಿ ಎರಡು ಬಾರಿಯ ಕೆಲಸಕ್ಕೆ ಸುಮಾರು ಇಪ್ಪತ್ತೈದು, ಮೂವತ್ತು ಸಾವಿರ ರೂ.ವಾದರೂ ಬೇಕು. ಗ್ರಾಪಂಗೆ ಹಸ್ತಾಂತರಿಸಬೇಕು: ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಕಿಂಡಿ ಅಣೆಕಟ್ಟನ್ನು ನಿರ್ಮಿಸಿ ಅದನ್ನು ಬಳಿಕ ಸ್ಥಳೀಯ ಗ್ರಾಪಂಗೆ ಹಸ್ತಾಂತರಿಸಬೇಕು. ಬಳಿಕ ಅದರ ನಿರ್ವಹಣೆಗೆ ಗ್ರಾಪಂ ಅನುದಾನವನ್ನಿಟ್ಟು ಸ್ಥಳೀಯರನ್ನು ಸೇರಿಸಿಕೊಂಡು ಒಂದು ಸಮಿತಿ ರಚಿಸಿ, ಅದರ ಮೂಲಕ ವರ್ಷಂಪ್ರತಿ ಇದರ ನಿರ್ವಹಣೆ ಮಾಡಿದಾಗ ಮಾತ್ರ ಇದರ ಮೂಲ ಉದ್ದೇಶ ಈಡೇರಲು ಸಾಧ್ಯ. ಆದರೆ ಕಿಂಡಿ ಅಣೆಕಟ್ಟು ನಿರ್ಮಿಸಿದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಅದನ್ನು ಗ್ರಾಪಂಗೆ ಹಸ್ತಾಂತರಿಸುವಂತಿಲ್ಲ. ಏಳು ಜನರ ಸಮಿತಿಯೊಂದನ್ನು ಮಾಡಿ ಅವರಿಗೆ ಹೊಣೆ ವಹಿಸಿ ಸುಮ್ಮನಾಗಿಬಿಟ್ಟಿದೆ. ಆದ್ದರಿಂದ ಇಲ್ಲಿ ಈ ಬಾರಿ ನೀರಿಂಗಿಸುವುದು ಎನ್ನುವುದು ಕನಸಿನ ಮಾತಾಗಿದೆ.

ಊರವರೇ ಕೈಜೋಡಿಸಿದರು: ನೀರನ್ನು ಶೇಖರಿಸಿಡಬೇಕಾದ ನೂತನ ಅಣೆಕಟ್ಟೇ ನೀರಿಲ್ಲದೆ ಬರಡಾಗಿರುವಾಗ ಮರುಗಿದ ಸ್ಥಳೀಯರು ಕೆಳಭಾಗದಲ್ಲಿ ಒಂದೊಂದು ಹಲಗೆಯನ್ನು ಜೋಡಿಸುವ ಕೆಲಸ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅಕಾಲಿಕ ಮಳೆಯೂ ಸುರಿದಿದ್ದು, ಇದರಿಂದಾಗಿ ಸಂಪೂರ್ಣ ಬತ್ತಿ ಹೋಗಿದ್ದ ಅಣೆಕಟ್ಟಿನ ತಳಭಾಗದಲ್ಲಿ ಮೊಣಕಾಲಿನವರೆಗೆ ನೀರು ನಿಲ್ಲುವಂತಾಗಿದೆ.

ಆದ್ದರಿಂದ ಕಿಂಡಿ ಅಣೆಕಟ್ಟುಗಳನ್ನು ಕಟ್ಟಿ ನೀರಿಂಗಿಸುವ ಯೋಜನೆ ಹಾಕಿಕೊಳ್ಳುವ ಸರಕಾರಗಳು ತಮ್ಮ ಮೂಲ ಉದ್ದೇಶವನ್ನು ಉದ್ಘಾಟನೆಯ ದಿನಕ್ಕೆ ಮಾತ್ರ ಸೀಮಿತಗೊಳಿಸದೇ ಆ ಬಳಿಕವೂ ಅವುಗಳು ಜನರಿಗೆ ಉಪಯೋಗವಾಗುವಂತೆ ನೋಡಿಕೊಂಡಾಗ ಮಾತ್ರ ಜನರ ತೆರಿಗೆ ದುಡ್ಡು ಪೋಲಾಗದೇ ಸರಿಯಾಗಿ ಜನರಿಗೆ ಉಪಯೋಗಕ್ಕೆ ಸಿಗಲು ಸಾಧ್ಯ.


ಈ ಕಿಂಡಿ ಅಣೆಕಟ್ಟುಗಳನ್ನು ಗ್ರಾಪಂಗೆ ವಹಿಸಿಕೊಡುವಂತೆ ಇಲ್ಲ. ಅದರ ನಿರ್ವಹಣೆಯ ಜವಾಬ್ದಾರಿಯನ್ನು ನಾವೇ ನೋಡಿಕೊಳ್ಳಬೇಕು. ಇದಕ್ಕೆ ಟೆಂಡರ್ ಕರೆಯಲಾಗುತ್ತದೆ. ಇಲ್ಲಿಯೂ ಏಳು ಜನರ ಸಮಿತಿಯೊಂದನ್ನು ಮಾಡಿ ಅವರಿಗೆ ನಿರ್ವಹಣೆಯ ಹೊಣೆ ಹೊರಿಸಲಾಗಿದೆ. ಅವರು ಕೆಳಭಾಗದಲ್ಲಿ ಹಲಗೆಯನ್ನು ಇಟ್ಟಿದ್ದಾರೆ. ಮತ್ತೆ ಮಳೆ ಬಂತು ಎಂದು ತೆರವುಗೊಳಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು.

- ಆನಂದ್ ಬಂಜನ್, ಸಹಾಯಕ ಅಭಿಯಂತರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

....................

ಪುತ್ತೂರು ತಾಲೂಕಿನಲ್ಲಿ ತೋಡು, ಸಣ್ಣ ಹೊಳೆಗಳಿಗೆ ಜಿ.ಪಂ.ನ ಅನುದಾನದಲ್ಲಿ ಕೂಡಾ ಹಲವು ಕಡೆ ಕಿಂಡಿ ಅಣೆಕಟ್ಟುಗಳನ್ನು ರಚಿಸಲಾಗಿದೆ. ಆದರೆ ಅದು ಉಪಯೋಗ ಬಂದಿದ್ದು, ನಿರ್ಮಾಣವಾದ ಒಂದೆರಡು ವರ್ಷ ಮಾತ್ರ. ಬಳಿಕ ನಿರ್ವಹಣೆಯಿಲ್ಲದೆ ಎಲ್ಲವೂ ಸ್ಮಾರಕಗಳಂತಾಗಿವೆ. ಕಿಂಡಿ ಅಣೆಕಟ್ಟುಗಳು ನಿರ್ಮಾಣವಾದ ಬಳಿಕ ಅದಕ್ಕೆ ಹಲಗೆ ಜೋಡಿಸುವವರೂ ಇಲ್ಲ. ಜೋಡಿಸಿದ ಹಲಗೆಗಳನ್ನು ತೆಗೆಯುವವರೂ ಇಲ್ಲ. ಎಷ್ಟೋ ಕಡೆ ಹಲಗೆಗಳು ಗೆದ್ದಲು ತಿಂದು ನಾಶವಾಗಿವೆ. ಆ ಬಳಿಕ ಅಲ್ಲಿಗೆ ಹೊಸ ಹಲಗೆಗಳು ಬಂದಿಲ್ಲ. ಇಂತಹ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ನೀರಿಂಗಿಸುವ ಬದಲು ಸಾರ್ವಜನಿಕರ ಹಣವನ್ನು ಪೋಲು ಮಾಡಲಾಗುತ್ತಿದೆ. ಆದ್ದರಿಂದ ಯಾವುದೇ ಇಲಾಖೆಗಳು ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಿ. ಅದನ್ನು ಸ್ಥಳೀಯ ಗ್ರಾ.ಪಂ.ಗಳಿಗೆ ಹಸ್ತಾಂತರಿಸಿ, ಅದರ ನಿರ್ವಹಣೆಯನ್ನು ಮಾತ್ರ ಸ್ಥಳೀಯ ಗ್ರಾ.ಪಂ.ಗಳಿಗೆ ಬಿಟ್ಟುಕೊಡಬೇಕು.

- ರೂಪೇಶ್ ರೈ ಅಲಿಮಾರ್ದ, ದ.ಕ. ಜಿಲ್ಲಾ ಸಂಚಾಲಕರು, ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ)

Writer - ದೀಪಕ್ ಉಬಾರ್

contributor

Editor - ದೀಪಕ್ ಉಬಾರ್

contributor

Similar News