ಟ್ರಂಪ್ ಪರ ಪಿತೂರಿ ಸಿದ್ಧಾಂತ ಪ್ರಚಾರ: 70,000 ಟ್ವಿಟರ್ ಖಾತೆಗಳು ಬಂದ್

Update: 2021-01-12 15:23 GMT

ಲಾಸ್ ಏಂಜಲಿಸ್ (ಅಮೆರಿಕ), ಜ. 12: ಅಮೆರಿಕದ ಸಂಸತ್‌ನ ಮೇಲೆ ಬುಧವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಯ ಬಳಿಕ, ‘ಕ್ಯೂಅನಾನ್’ ಎಂಬ ಸಿದ್ಧಾಂತದ ಪ್ರಚಾರಕ್ಕೆ ಮೀಸಲಾಗಿರುವ 70,000ಕ್ಕೂ ಅಧಿಕ ಖಾತೆಗಳನ್ನು ಸ್ಥಗಿತಗೊಳಿಸಿರುವುದಾಗಿ ಟ್ವಿಟರ್ ಇಂಕ್ ಕಂಪೆನಿ ತಿಳಿಸಿದೆ.

‘‘ಸಂಸತ್‌ನ ಮೇಲೆ ನಡೆದ ದಾಳಿ ಹಾಗೂ ಅಪಾಯ ಸಾಧ್ಯತೆಯ ಹೆಚ್ಚಳದ ಹಿನ್ನೆಲೆಯಲ್ಲಿ, ‘ಕ್ಯೂಅನಾನ್’ ಬರಹಗಳನ್ನು ಹಂಚುವುದಕ್ಕೆ ಮೀಸಲಾಗಿರುವ ಸಾವಿರಾರು ಖಾತೆಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸುವ ಕಾರ್ಯವನ್ನು ನಾವು ಶುಕ್ರವಾರ ಆರಂಭಿಸಿದ್ದೇವೆ’’ ಎಂದು ಟ್ವಿಟರ್ ಸೋಮವಾರ ಬ್ಲಾಗ್ ಒಂದರಲ್ಲಿ ತಿಳಿಸಿದೆ.

‘‘ಈ ಖಾತೆಗಳು ಅಪಾಯಕಾರಿ ಕ್ಯೂಅನಾನ್ ಬರಹಗಳನ್ನು ಹಂಚುವ ಏಕೈಕ ಉದ್ದೇಶವನ್ನು ಹೊಂದಿದ್ದವು’’ ಎಂದು ಟ್ವಿಟರ್ ಹೇಳಿದೆ.

ಏನಿದು ‘ಕ್ಯೂಅನಾನ್’ ಸಿದ್ದಾಂತ?

   ‘ಕ್ಯೂಅನಾನ್’ ಎನ್ನುವುದು ಕಡುಬಲಪಂಥೀಯರ ಆಧಾರರಹಿತ ಪಿತೂರಿ ಸಿದ್ಧಾಂತ. ಸೈತಾನನನ್ನು ಪೂಜಿಸುವ, ನರಮಾಂಸ ತಿನ್ನುವ ಶಿಶುಕಾಮಿಗಳ ಗುಂಪೊಂದು ಜಾಗತಿಕ ಮಟ್ಟದಲ್ಲಿ ಮಕ್ಕಳ ಕಳ್ಳಸಾಗಾಣಿಕೆಯಲ್ಲಿ ನಿರತವಾಗಿದೆ ಹಾಗೂ ಈ ಗುಂಪಿನ ವಿರುದ್ಧ ಡೊನಾಲ್ಡ್ ಟ್ರಂಪ್ ಹೋರಾಡುತ್ತಿದ್ದಾರೆ ಹಾಗೂ ಅದಕ್ಕಾಗಿ ಟ್ರಂಪ್ ವಿರುದ್ಧ ಈ ಗುಂಪು ಪಿತೂರಿ ನಡೆಸುತ್ತಿದೆ ಎನ್ನುವುದು ‘ಕ್ಯೂಅನಾನ್’ನ ಮೂಲ ಸಿದ್ಧಾಂತ.

ಈ ತಥಾಕಥಿತ ಗುಂಪಿನ ಸಾವಿರಾರು ಸದಸ್ಯರನ್ನು ಬಂಧಿಸಲು ‘ಸ್ಟಾರ್ಮ್’ (ಬಿರುಗಾಳಿ) ಎಂಬ ಹೆಸರಿನ ಕಾರ್ಯಾಚರಣೆಯೊಂದನ್ನು ನಡೆಸಲು ಟ್ರಂಪ್ ದಿನ ನಿಗದಿಪಡಿಸುತ್ತಿದ್ದಾರೆ ಎಂದು ಈ ಪಿತೂರಿ ಸಿದ್ಧಾಂತವು ಹೇಳಿಕೊಳ್ಳುತ್ತದೆ.

ಹಲವು ಪ್ರಗತಿಪರ ಹಾಲಿವುಡ್ ನಟರು, ಡೆಮಾಕ್ರಟಿಕ್ ಪಕ್ಷದ ರಾಜಕಾರಣಿಗಳು ಹಾಗೂ ಉನ್ನತ ಸ್ತರದ ಸರಕಾರಿ ಅಧಿಕಾರಿಗಳು ಈ ಗುಂಪಿನ ಸದಸ್ಯರು ಎಂದು ಕ್ಯೂಅನಾನ್ ಬೆಂಬಲಿಗರು ಹೇಳಿಕೊಳ್ಳುತ್ತಾರೆ.

ಈ ನಕಲಿ ಸಿದ್ಧಾಂತವನ್ನು ಪಚಾರಪಡಿಸುವುದಕ್ಕಾಗಿ ಹಾಗೂ ಇದಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಗಳನ್ನು ಹರಡುವುದಕ್ಕಾಗಿ ಟ್ರಂಪ್ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News