ಟ್ರಯಲ್ ಮುಗಿಯದೇ ಲಸಿಕೆ ನೀಡಲು ಭಾರತೀಯರು ಗಿನಿ ಹಂದಿಗಳಲ್ಲ: ಕಾಂಗ್ರೆಸ್ ಆಕ್ರೋಶ

Update: 2021-01-13 13:05 GMT

ಹೊಸದಿಲ್ಲಿ.ಜ.13: ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಮುಗಿಯುವ ಮುನ್ನವೇ  ಬಳಕೆಗೆ ಅನುಮತಿ ದೊರೆತ ಭಾರತ್ ಬಯೋಟೆಕ್‍ನ ಕೋವಿಡ್ ಲಸಿಕೆ ಕೊವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಪಕ್ಷ ಮತ್ತೆ  ತನ್ನ  ಸಂಶಯ ವ್ಯಕ್ತಪಡಿಸಿದೆ. ಇಂದು ಕೊವ್ಯಾಕ್ಸಿನ್ ಲಸಿಕೆ ದಿಲ್ಲಿ ಮತ್ತು ದೇಶದ ಹತ್ತು ಇತರ ನಗರಗಳಿಗೆ ರವಾನೆಯಾಗುತ್ತಿದ್ದಂತೆಯೇ ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಅವರು ಪ್ರತಿಕ್ರಿಯಿಸಿ ``ಲಸಿಕೆಯ ಅಧಿಕೃತ ನೀಡುವಿಕೆಯನ್ನೇ ಮೂರನೇ ಹಂತದ ಟ್ರಯಲ್ ಎಂದು  ತಿಳಿಯಲು ಸಾಧ್ಯವಿಲ್ಲ. ಭಾರತೀಯರು ಗಿನಿ ಹಂದಿಗಳಲ್ಲ," ಎಂದು ಹೇಳಿದ್ದಾರೆ. ಗಿನಿ ಪಿಗ್‌ ಗಳನ್ನು ಪ್ರಯೋಗಗಳಿಗೆ ಬಳಸಲಾಗುತ್ತದೆ.

ಆನಂದ್ ಪುರ್ ಸಾಹಿಬ್ ಕ್ಷೇತ್ರದ ಸಂಸದರೂ ಆಗಿರುವ ತಿವಾರಿ ಮಾತನಾಡಿ "ನಿನ್ನೆಯ ತನಕ ಕೊವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿಸಲಾಗಿದೆ ಎಂದು ಎನ್‍ಡಿಎ/ಬಿಜೆಪಿ ಹೇಳುತ್ತಿತ್ತು," ಎಂದು ಹೇಳಿದ್ದಾರೆ. ರಾಜ್ಯಗಳಿಗೆ ಯಾವ ಲಸಿಕೆ ಬೇಕು ಎಂದು ಆಯ್ಕೆ ಮಾಡುವ ಅಧಿಕಾರವಿಲ್ಲವೆಂದು ಈಗಾಗಲೇ ಸರಕಾರ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

ಜನವರಿ 11ರಂದು ತಿವಾರಿ ಟ್ವೀಟ್ ಮಾಡಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರನ್ನು ಟ್ಯಾಗ್ ಮಾಡಿ "ಭಾರತ್ ಬಯೋಟೆಕ್‍ನ ಲಸಿಕೆ ಮನುಷ್ಯರ ಮೇಲಿನ ಬಳಕೆಗೆ ಸುರಕ್ಷಿತವೇ ಹಾಗೂ ಸರಕಾರ ಅದರ ಸುರಕ್ಷತೆಯ ಖಾತರಿ ನೀಡಬಲ್ಲುದೇ?" ಎಂದು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News