‘ಅನೈತಿಕ ಸಂಬಂಧ ಅಪರಾಧವಲ್ಲ’ ಎಂಬ ತೀರ್ಪನ್ನು ಸಶಸ್ತ್ರ ಪಡೆಗಳಿಗೆ ಅನ್ವಯಿಸದಂತೆ ಸುಪ್ರೀಂಗೆ ಕೇಂದ್ರದ ಮನವಿ

Update: 2021-01-13 13:53 GMT

ಹೊಸದಿಲ್ಲಿ,ಜ.13: ಭಾರತೀಯ ದಂಡ ಸಂಹಿತೆ (ಐಪಿಸಿ)ಯಡಿ ವ್ಯಭಿಚಾರವನ್ನು ನಿರಪರಾಧೀಕರಣಗೊಳಿಸಿರುವ 2018ರ ತೀರ್ಪನ್ನು ಸಶಸ್ತ್ರ ಪಡೆಗಳಿಗೆ ಅನ್ವಯಿಸಬಾರದು ಎಂದು ಆಗ್ರಹಿಸಿ ಕೇಂದ್ರವು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ನೋಟಿಸನ್ನು ಹೊರಡಿಸಿದೆ.

ತೀರ್ಪಿಗೆ ಕಾರಣವಾಗಿದ್ದ ಪಿಐಎಲ್‌ನ್ನು ಸಲ್ಲಿಸಿದ್ದ ಅರ್ಜಿದಾರರಿಗೆ ಮತ್ತು ಇತರರಿಗೆ ನೋಟಿಸನ್ನು ಹೊರಡಿಸಿದ ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್,ನವೀನ ಸಿನ್ಹಾ ಮತ್ತು ಕೆ.ಎಂ.ಜೋಸೆಫ್ ಅವರ ಪೀಠವು,ನ್ಯಾಯಾಲಯದ ನಿಲುವನ್ನು ಸ್ಪಷ್ಟಪಡಿಸಬಲ್ಲ ಐವರು ನ್ಯಾಯಾಧೀಶರ ಸಂವಿಧಾನ ಪೀಠದ ರಚನೆಗಾಗಿ ವಿಷಯವನ್ನು ಮು.ನ್ಯಾ.ಎಸ್.ಎ.ಬೋಬ್ಡೆ ಅವರಿಗೆ ಒಪ್ಪಿಸಿತು. 2018ರ ಐತಿಹಾಸಿಕ ತೀರ್ಪಿನಲ್ಲಿ ಆಗಿನ ಮುಖ್ಯ ನ್ಯಾಯಾಧೀಶ ದೀಪಕ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಐಪಿಸಿಯ ಕಲಂ 497 (ವ್ಯಭಿಚಾರ)ನ್ನು ರದ್ದುಗೊಳಿಸಿ, ವ್ಯಭಿಚಾರವು ಅಪರಾಧವಲ್ಲ ಮತ್ತು ಮಹಿಳೆಯರ ಪ್ರತ್ಯೇಕತೆಗೆ ಘಾಸಿಯನ್ನುಂಟು ಮಾಡುವ ಹಾಗೂ ಅವರನ್ನು ಗಂಡಂದಿರ ಚರಾಸ್ತಿಗಳನ್ನಾಗಿ ಪರಿಗಣಿಸುವ ಕಲಂ 497 ಸಂವಿಧಾನ ವಿರೋಧಿಯಾಗಿದೆ ಎಂದು ಘೋಷಿಸಿತ್ತು. ಆದರೆ ಕೌಟುಂಬಿಕ ವಿವಾದಗಳಲ್ಲಿ ವಿವಾಹ ವಿಚ್ಛೇದನವನ್ನು ಕೋರಲು ವ್ಯಭಿಚಾರವು ಒಂದು ಕಾರಣವಾಗಿ ಮುಂದುವರಿಯುತ್ತದೆ ಎಂದು ಅದು ಸ್ಪಷ್ಟಪಡಿಸಿತ್ತು.

ಜೋಸೆಫ್ ಶೈನ್ ಅವರು ಸಲ್ಲಿಸಿದ್ದ ಪಿಐಎಲ್‌ನಲ್ಲಿ ತನ್ನ ಮಧ್ಯಂತರ ಅರ್ಜಿಯಲ್ಲಿ ತೀರ್ಪಿನ ಬಗ್ಗೆ ಸ್ಪಷ್ಟನೆಯನ್ನು ಕೋರಿರುವ ಕೇಂದ್ರವು,ಪಡೆಗಳಲ್ಲಿ ಶಿಸ್ತು ಕಾಯ್ದುಕೊಳ್ಳಲು ಅನೈತಿಕ ಸಂಬಂಧಗಳಲ್ಲಿ ತೊಡಗಿಕೊಂಡಿದ್ದಕ್ಕಾಗಿ ತನ್ನ ಸಿಬ್ಬಂದಿಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳುವ ಸಶಸ್ತ್ರ ಪಡೆಗಳ ವಿಶೇಷ ಕಾನೂನುಗಳು ಮತ್ತು ನಿಯಮಗಳಿಗೆ ಈ ತೀರ್ಪನ್ನು ಅನ್ವಯಿಸದಂತೆ ನಿರ್ದೇಶವನ್ನು ಹೊರಡಿಸುವಂತೆ ಕೇಳಿಕೊಂಡಿದೆ.

ಯೋಧರು ಮತ್ತು ಅಧಿಕಾರಿಗಳನ್ನು ಮುಂಚೂಣಿಯ ದುರ್ಗಮ ಪ್ರದೇಶಗಳಲ್ಲಿ ನಿಯೋಜಿಸಿದ ಸಂದರ್ಭಗಳಲ್ಲಿ ಮೂಲಶಿಬಿರಗಳಲ್ಲಿ ಅವರ ಕುಟುಂಬಗಳ ಕಾಳಜಿಯನ್ನು ಇತರ ಅಧಿಕಾರಿಗಳು ವಹಿಸುತ್ತಾರೆ ಮತ್ತು ವ್ಯಭಿಚಾರ ಅಥವಾ ಅನೈತಿಕ ಸಂಬಂಧಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳುವ ಅವಕಾಶಗಳನ್ನು ಒದಗಿಸಿರುವ ಕಾನೂನುಗಳು ಮತ್ತು ನಿಯಮಗಳನ್ನು ಶಿಸ್ತನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ. ಸಹೋದ್ಯೋಗಿಯ ಪತ್ನಿಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದಕ್ಕಾಗಿ ಅನುಚಿತ ವರ್ತನೆಯ ಆರೋಪದಲ್ಲಿ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಬಹುದಾಗಿದೆ ಎಂದು ಕೇಂದ್ರವು ಅರ್ಜಿಯಲ್ಲಿ ವಿವರಿಸಿದೆ.

ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿದ್ದ ಐಪಿಸಿಯ ಕಲಂ 497ರಡಿ ಗರಿಷ್ಠ ಐದು ವರ್ಷಗಳ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿತ್ತು.

ಕಲಂ 497 ನಿರಂಕುಶ ಮತ್ತು ಪುರಾತನ ಕಾನೂನು ಆಗಿದ್ದು, ಮಹಿಳೆಯರ ಸಮಾನತೆಯ ಮತ್ತು ಸಮಾನ ಅವಕಾಶಗಳ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News