ಗ್ರಾಹಕರನ್ನು ಸುಲಿಗೆ ಮಾಡಿದ ಕಂಪನಿಗಳ ಪಟ್ಟಿಯಲ್ಲಿ ಸಿಪ್ಲಾ, ಸನ್‌ಫಾರ್ಮಾ, ಕ್ಯಾಡಿಲಾ ಮತ್ತು ಲುಪಿನ್

Update: 2021-01-13 15:50 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜ.13: ಗ್ರಾಹಕರಿಂದ ದುಬಾರಿ ದರಗಳನ್ನು ವಸೂಲು ಮಾಡಿದ ಆರೋಪ ಹೊತ್ತಿರುವ ಕಂಪನಿಗಳ ಪಟ್ಟಿಯನ್ನು ರಾಷ್ಟ್ರೀಯ ಔಷಧಿ ಬೆಲೆ ನಿಗದಿ ಪ್ರಾಧಿಕಾರ (ಎನ್‌ಪಿಪಿಎ)ವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಸಿಪ್ಲಾ,ಸನ್‌ಫಾರ್ಮಾ,ಕ್ಯಾಡಿಲಾ ಮತ್ತು ಲುಪಿನ್ ಸೇರಿದಂತೆ ಪ್ರಮುಖ ಔಷಧಿ ತಯಾರಿಕೆ ಕಂಪನಿಗಳು ಈ ಪಟ್ಟಿಯಲ್ಲಿವೆ.

ವಿಚಾರಣಾಧೀನವಾಗಿರುವ,ಈ ದುಬಾರಿ ದರ ವಸೂಲಿ ಪಟ್ಟಿಯಲ್ಲಿ ಎನ್‌ಪಿಪಿಎ ಅಸ್ತಿತ್ವಕ್ಕೆ ಬಂದಿದ್ದ 1997ರಲ್ಲಿ ದಾಖಲಾಗಿರುವ ಹಳೆಯ ಪ್ರಕರಣಗಳೂ ಸೇರಿವೆ. ಇವು ತಾವು ಗ್ರಾಹಕರಿಗೆ ಹೆಚ್ಚಿನ ದರಗಳನ್ನು ವಿಧಿಸಿರುವ ಆರೋಪಗಳ ವಿರುದ್ಧ ಕಂಪನಿಗಳು ನ್ಯಾಯಾಲಯದ ಮೆಟ್ಟಿಲನ್ನೇರಿರುವ ಪ್ರಕರಣಗಳಾ ಗಿವೆ.

ಬಡ್ಡಿ ಸೇರಿದಂತೆ ಒಟ್ಟು ಹೆಚ್ಚುವರಿಯಾಗಿ ವಸೂಲಿ ಮಾಡಿದ ಅಂದಾಜು ಮೊತ್ತವು 6,550 ಕೋ.ರೂ.ಗಳಷ್ಟಿದ್ದು,ಕಂಪನಿಗಳು ಈಗಾಗಲೇ ಪಾವತಿಸಿರುವ ಭಾಗಶಃ ದಂಡಗಳ ಮೊತ್ತ ಇದರಲ್ಲಿ ಸೇರಿಲ್ಲ.

ಪಟ್ಟಿಯಲ್ಲಿ ವ್ಯತ್ಯಾಸಗಳಿದ್ದರೆ ಅದನ್ನು ಎನ್‌ಪಿಪಿಎಗೆ ತಿಳಿಸಲು ಕಂಪನಿಗಳಿಗೆ 15 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.

3,000 ಕೋ.ರೂ.ಗೂ ಅಧಿಕ (ಬಡ್ಡಿಯನ್ನು ಸೇರಿಸಿ ಆದರೆ ಈಗಾಗಲೇ ಪಾವತಿಸಿರುವ ದಂಡವನ್ನು ಕಳೆದು) ದಂಡದೊಂದಿಗೆ ಮುಂಬೈನ ಸಿಪ್ಲಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸನ್‌ಫಾರ್ಮಾಕ್ಕೆ ದಂಡದ ಮೊತ್ತ 250 ಕೋ.ರೂ.ಗಳಾಗಿದ್ದು,2015ರಲ್ಲಿ ಸನ್‌ಫಾರ್ಮಾದಲ್ಲಿ ವಿಲೀನಗೊಂಡಿರುವ ರ್ಯಾನ್‌ಬಾಕ್ಸಿ ಸುಮಾರು 400 ಕೋ.ರೂ.ಗಳ ದಂಡವನ್ನು ಎದುರಿಸುತ್ತಿದೆ. ಲುಪಿನ್67 ಕೋ.ರೂ.,ಗ್ಲಾಕ್ಸೋ ಸ್ಮಿಥ್‌ಕ್ಲೈನ್ 3.42 ಕೋ.ರೂ.ಮತ್ತು ಕ್ಯಾಡಿಲಾ 34 ಕೋ.ರೂ.ದಂಡವನ್ನು ಪಾವತಿಸಬೇಕಿವೆ.

2013ರಲ್ಲಿ ಹೆಚ್ಚುವರಿಯಾಗಿ ವಸೂಲು ಮಾಡಿದ್ದ ಒಟ್ಟು ಮೊತ್ತದ ಶೇ.50ರಷ್ಟು ಪಾಲು ಸಿಪ್ಲಾ ಮತ್ತು ರ್ಯಾನ್‌ಬಾಕ್ಸಿಗೆ ಸೇರಿತ್ತು. ಆಗ ಸಿಪ್ಲಾದ ದಂಡದ ಮೊತ್ತ 1,382 ಕೋ.ರೂ.ಮತ್ತು ರ್ಯಾನ್‌ಬಾಕ್ಸಿಯ ಮೊತ್ತ 136.2 ಕೋ.ರೂ.ಗಳಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News