ಜ. 17ರಂದು ಸ್ವದೇಶಕ್ಕೆ ಮರಳುವೆ ಎಂದ ರಶ್ಯ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿ

Update: 2021-01-13 16:09 GMT

ಬರ್ಲಿನ್ (ಜರ್ಮನಿ), ಜ. 13: ನಾನು ರವಿವಾರ ಸ್ವದೇಶಕ್ಕೆ ಮರಳಲು ಉದ್ದೇಶಿಸಿದ್ದೇನೆ ಎಂದು ಈಗ ಜರ್ಮನಿಯಲ್ಲಿರುವ ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿ ಬುಧವಾರ ಹೇಳಿದ್ದಾರೆ.

‘‘ನಾನು ವಿಮಾನ ಟಿಕೆಟ್ ಖರೀದಿಸಿದ್ದೇನೆ. ವಿಮಾನವು ಜನವರಿ 17ರಂದು ರಶ್ಯದಲ್ಲಿ ಇಳಿಯುವುದು’’ ಎಂದು 44 ವರ್ಷದ ರಶ್ಯ ಪ್ರತಿಪಕ್ಷ ನಾಯಕ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

‘‘ನಾನು ನನ್ನ ದೇಶಕ್ಕೆ ಮರಳುತ್ತೇನೆಯೋ ಇಲ್ಲವೋ ಎನ್ನುವ ಪ್ರಶ್ನೆ ಯಾವತ್ತೂ ಇರಲಿಲ್ಲ. ಯಾಕೆಂದರೆ, ನಾನು ದೇಶದಿಂದ ಹೊರ ಹೋಗಿಯೇ ಇಲ್ಲ. ಅವರು ನನ್ನನ್ನು ಕೊಲ್ಲಲು ಪ್ರಯತ್ನಿಸಿದರು. ಹಾಗಾಗಿ, ನಾನು ಜರ್ಮನಿಯಲ್ಲಿ ಹೋಗಿ ಬಿದ್ದಿದ್ದೆ ಅಷ್ಟೆ’’ ಎಂದು ಭ್ರಷ್ಟಾಚಾರ ನಿಗ್ರಹ ಹೋರಾಟಗಾರ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

ಆಗಸ್ಟ್ 20ರಂದು ಸೈಬೀರಿಯದಿಂದ ಮಾಸ್ಕೋಗೆ ಹೋಗುತ್ತಿದ್ದ ವಿಮಾನದಲ್ಲಿ ತೀವ್ರ ಅಸ್ವಸ್ಥಗೊಂಡ ನವಾಲ್ನಿಯನ್ನು ಮೊದಲು ರಶ್ಯದ ಓಮ್‌ಸ್ಕ್ ನಗರದಲ್ಲಿರುವ ಆಸ್ಪತ್ರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಸೇರಿಸಲಾಗಿತ್ತು. ಎರಡು ದಿನಗಳ ಬಳಿಕ ಅವರನ್ನು ಜರ್ಮನಿ ರಾಜಧಾನಿ ಬರ್ಲಿನ್‌ಗೆ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತು.

ನರಮಂಡಲದ ಮೇಲೆ ದುಷ್ಪರಿಣಾಮ ಬೀರುವ ರಾಸಾಯನಿಕ ನೊವಿಚೊಕ್‌ನ್ನು ಅವರ ಮೇಲೆ ಪ್ರಯೋಗಿಸಲಾಗಿತ್ತು ಎಂದು ಜರ್ಮನಿಯ ಆಸ್ಪತ್ರೆ ತಿಳಿಸಿದೆ.

ನವಾಲ್ನಿ ರಶ್ಯಕ್ಕೆ ಮರಳಿದರೆ ಅವರನ್ನು ಜೈಲಿಗೆ ಹಾಕುವುದಾಗಿ ರಶ್ಯ ಬೆದರಿಸಿದೆ ಎಂದು ನವಾಲ್ನಿ ಮತ್ತು ಅವರ ಮಿತ್ರರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News